ಮಂಗಳೂರು : ಮ್ಯಾಟ್ರಿಮನಿ ಸೈಟ್ನಲ್ಲಿ ತನ್ನ ವಿವರಗಳನ್ನು ಅಪ್ಲೋಡ್ ಮಾಡಿ, ಮುಗ್ಧ ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಹಾಗೂ ಒಡವೆಗಳನ್ನು ದೋಚುತ್ತಿದ್ದ ಕಾವೂರು ಮೂಲದ ಸುಶಾಂತ್ ಪೂಜಾರಿ (32) ಎಂಬಾತನನ್ನು ಮಂಗಳೂರಿನ ಕಾವೂರು ಪೊಲೀಸರು ಬಂಧಿಸಿದ್ದಾರೆ. ಸುಶಾಂತ್ ಕೇವಲ ವಂಚನೆಯಷ್ಟೇ ಅಲ್ಲದೆ, ಮುಂಬೈ, ಉಡುಪಿ ಸೇರಿದಂತೆ ಹಲವು ಕಡೆಗಳಲ್ಲಿ ಈಗಾಗಲೇ ಮದುವೆಯಾಗಿದ್ದು, ಇನ್ನು ಹಲವು ಕಡೆ ಮದುವೆಯ ಭರವಸೆ ನೀಡಿ ವಂಚಿಸುತ್ತಿದ್ದ ಎಂಬ ಆಘಾತಕಾರಿ ಸತ್ಯ ತನಿಖೆಯ ವೇಳೆ ಬಯಲಾಗಿದೆ. ಈತನಿಗೆ ಸಾಥ್ ನೀಡುತ್ತಿದ್ದ ಮುಲ್ಕಿಯ ಭಾಸ್ಕರ್ ಎಂಬಾತನನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವಂಚಕನ ಬಲೆಗೆ ಬಿದ್ದ ಮುಂಬೈ ಮೂಲದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಾಗ ಈತನ ಕೃತ್ಯಗಳು ಬೆಳಕಿಗೆ ಬಂದಿವೆ. 2025ರ ಫೆಬ್ರವರಿಯಲ್ಲಿ ಮುಂಬೈನಲ್ಲಿ ಮದುವೆಯಾಗಿದ್ದ ಈತ, ಆಕೆಯಿಂದ ಹಂತ ಹಂತವಾಗಿ 6.60 ಲಕ್ಷ ರೂಪಾಯಿ ಹಣ ಪಡೆದು ನವೆಂಬರ್ನಲ್ಲಿ ನಾಪತ್ತೆಯಾಗಿದ್ದ. ಈ ಬಗ್ಗೆ ಅನುಮಾನಗೊಂಡ ಮಹಿಳೆ ವಿಚಾರಿಸಿದಾಗ ಈತನಿಗೆ ಈಗಾಗಲೇ ಮದುವೆಯಾಗಿರುವ ವಿಷಯ ತಿಳಿದುಬಂದಿದೆ. ವಿಚಾರಣೆಯ ವೇಳೆ ಆರೋಪಿ ತಾನು 2021ರಲ್ಲಿ ಉಡುಪಿಯ ಯುವತಿಯನ್ನು ಮದುವೆಯಾಗಿರುವುದಾಗಿ ಮತ್ತು ಬೆಂಗಳೂರು, ಕಾರ್ಕಳ ಹಾಗೂ ಮುಂಬೈನ ಇತರೆಡೆಗಳಲ್ಲಿ ಹಲವು ಯುವತಿಯರಿಗೆ ಮದುವೆಯ ಆಸೆ ತೋರಿಸಿ ವಂಚಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿ ಸುಶಾಂತ್ ಪೂಜಾರಿ ವಿರುದ್ಧ ಈ ಹಿಂದೆಯೇ ಮಂಗಳೂರಿನ ಉರ್ವಾ, ಉಡುಪಿಯ ಕೋಟಾ ಮತ್ತು ಮಹಾರಾಷ್ಟ್ರದ ಅರ್ನಾಲ್ ಪೊಲೀಸ್ ಠಾಣೆಗಳಲ್ಲಿ ವಂಚನೆ, ಕಳ್ಳತನ ಹಾಗೂ ಗಂಭೀರ ಸ್ವರೂಪದ ಪೋಕ್ಸೋ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ. ಈತನ ವಂಚಕ ಬುದ್ಧಿಗೆ ಸಾಥ್ ನೀಡುತ್ತಿದ್ದ ಭಾಸ್ಕರ್ ಎಂಬಾತ ಸುಶಾಂತ್ನನ್ನು ತನ್ನ ಅಳಿಯ ಎಂದು ಪರಿಚಯಿಸಿ ಮದುವೆ ಸಂಪ್ರದಾಯಗಳಲ್ಲಿ ಪಾಲ್ಗೊಳ್ಳುತ್ತಿದ್ದ. ಪ್ರಸ್ತುತ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಪೊಲೀಸರು ಈತನಿಂದ ವಂಚನೆಗೆ ಒಳಗಾದ ಇತರ ಸಂತ್ರಸ್ತರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









