ಮಂಗಳೂರು: ನೂರಾರು ಕೋಟಿ ರೂಪಾಯಿ ಸಾಲ ಕೊಡಿಸುವುದಾಗಿ ಹೇಳಿ ಉದ್ಯಮಿಗಳಿಗೆ ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ರೋಷನ್ ಸಲ್ಡಾನನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಆತನಿಗೆ ಸೇರಿದ ರೂ. 2.85 ಕೋಟಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಆಸ್ತಿಯಲ್ಲಿ ರೋಷನ್ ಸಲ್ಡಾನನ ಐಷಾರಾಮಿ ಮನೆ ಮತ್ತು ಬ್ಯಾಂಕ್ ಖಾತೆಗಳಲ್ಲಿನ ಹಣವೂ ಸೇರಿದೆ ಎಂದು ಮಂಗಳೂರು ಉಪವಲಯ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಂಚಕನು ದೇಶದ ಶ್ರೀಮಂತ ವ್ಯಕ್ತಿಗಳು ಮತ್ತು ಉದ್ಯಮಿಗಳಿಗೆ ಸುಮಾರು ₹200 ಕೋಟಿಗೂ ಅಧಿಕ ಹಣವನ್ನು ಮೋಸ ಮಾಡಿದ್ದನು. ನೂರಾರು ಕೋಟಿಗಳ ಸಾಲದ ಆಮಿಷವೊಡ್ಡಿ, ಆರಂಭದಲ್ಲಿರೂ. 5 ರಿಂದ ರೂ. 10 ಕೋಟಿಗಳಷ್ಟು ಮುಂಗಡ ಹಣವನ್ನು ಪಡೆದು ಜನರನ್ನು ವಂಚಿಸುತ್ತಿದ್ದ. ರೋಷನ್ ಸಲ್ಡಾನನ ಐಷಾರಾಮಿ ಜೀವನ ಶೈಲಿ ಮತ್ತು ಬಂಗಲೆಯನ್ನು ಕಂಡು ಈ ಹಿಂದೆ ಅಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದರು.
ಈ ವಂಚನೆಯ ಸಂಬಂಧ ರೋಷನ್ ಸಲ್ಡಾನ, ಆತನ ಪತ್ನಿ ಢಫ್ನಿನೀತು ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಅದರ ಆಧಾರದ ಮೇಲೆ ಇಡಿ ತನಿಖೆ ತೀವ್ರಗೊಳಿಸಿತು. ಈ ಹಿಂದೆಯೂ ಇಲಾಖೆಯು ಸುಮಾರು ರೂ. 9.5 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.
ಇಬ್ಬರು ಉದ್ಯಮಿಗಳು ನೀಡಿದ ದೂರಿನ ಮೇರೆಗೆ, ಮಂಗಳೂರು ಪೊಲೀಸರು ಕಳೆದ ವರ್ಷ ಜುಲೈ 17 ರಂದು ರೋಷನ್ ಸಲ್ಡಾನನನ್ನು ಬಂಧಿಸಿದ್ದರು. ಸದ್ಯ ಜಾರಿ ನಿರ್ದೇಶನಾಲಯವು ಈ ಬೃಹತ್ ಆರ್ಥಿಕ ವಂಚನೆಯ ಜಾಲದ ಕುರಿತು ತನ್ನ ತನಿಖೆಯನ್ನು ಮುಂದುವರಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









