ಮಂಗಳೂರು : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನ ಕಲಾವಿದರ ಕುರಿತು ನೀಡಿರುವ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯು ಹಿಂದೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಶಾಸಕ ವೈ. ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಕರಾವಳಿ ಭಾಗದಲ್ಲಿ ಯಕ್ಷಗಾನಕ್ಕೆ ದೈವಿಕ ಕಲೆಯ ಮಹತ್ವವಿದೆ. ಕಲಾವಿದರು ದೇವರ ವೇಷಧಾರಿಗಳಾಗಿರುತ್ತಾರೆ. ಬಿಳಿಮಲೆಯವರು ಯಕ್ಷಗಾನ ಸ್ತ್ರೀ ವೇಷಧಾರಿಗಳನ್ನು ನೋಡಿದಾಗ ‘ಕ್ರಶ್’ ಆಗುತ್ತಿತ್ತು ಎಂದು ನೀಡಿರುವ ಹೇಳಿಕೆ ಕಲಾವಿದರ ಶ್ರದ್ಧೆ ಹಾಗೂ ಭಾವನೆಗೆ ದಕ್ಕೆ ತಂದಿದೆ. ಇದು ಬೇಕೆಂತಲೇ ವಿವಾದವನ್ನು ಸೃಷ್ಟಿಸುವ ಷಡ್ಯಂತ್ರ ಎಂದು ಅವರು ಆರೋಪಿಸಿದ್ದಾರೆ.
ಇದೇ ವೇಳೆ, ಯಕ್ಷಗಾನ ಕಲಾವಿದರಾದ ಅಶೋಕ್ ಶೆಟ್ಟಿ ಸರಪಾಡಿ ಅವರು ಮಾತನಾಡಿ, ಬಿಳಿಮಲೆಯವರ ಹೇಳಿಕೆ ಕಲಾ ವಲಯಕ್ಕೆ ‘ಬಾಂಬ್ ಹಾಕಿದಂತೆ’ ಆಗಿದ್ದು, ಇದು ಕಲಾವಿದರ ನೈತಿಕ ಸ್ಥೈರ್ಯ ಕುಗ್ಗಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಇಂತಹ ಮಾತುಗಳನ್ನು ಆಡುವುದು ಸರಿಯಲ್ಲ, ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶಾಸಕ ಭರತ್ ಶೆಟ್ಟಿ ಅವರು ರಾಜ್ಯ ಸರ್ಕಾರವನ್ನು ತಕ್ಷಣವೇ ಪುರುಷೋತ್ತಮ ಬಿಳಿಮಲೆಯವರನ್ನು ಅಧಿಕಾರ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ವಿವಾದದ ಕುರಿತು ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ಕಲಾಭಿಮಾನಿಗಳು ಏಕೆ ಮೌನ ವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಅರುಣ್ ಜಿ ಶೇಟ್ ಮತ್ತು ಇತರ ಕಲಾವಿದರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









