ಮಂಗಳೂರು, ಉಳ್ಳಾಲ: ಕೇರಳ ಮತ್ತು ಕರ್ನಾಟಕ ಗಡಿಭಾಗದ ತಲಪಾಡಿ ಸಮೀಪದಲ್ಲಿರುವ ತಚ್ಚಣಿ ಎಂಬ ಪ್ರದೇಶದಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ (MDMA) ಮಾರಾಟ ಮತ್ತು ಸಾಗಾಟ ಜಾಲವೊಂದನ್ನು ಉಳ್ಳಾಲ ಪೊಲೀಸರು ಭೇದಿಸಿದ್ದಾರೆ. ಸೋಮವಾರದಂದು ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದು, ಅವರಿಂದ ಅಂದಾಜು ₹2 ಲಕ್ಷ ಮೌಲ್ಯದ 42 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಗಡಿ ದಾಟಿ ನಡೆಯುತ್ತಿದ್ದ ಡ್ರಗ್ಸ್ ದಂಧೆಗೆ ಈ ಮೂಲಕ ಬ್ರೇಕ್ ಹಾಕಿದಂತಾಗಿದೆ.
ಬಂಧಿತ ಆರೋಪಿಗಳನ್ನು ಉಳ್ಳಾಲ ತಾಲೂಕಿನ ತಲಪಾಡಿ ಕೊಲಂಗೆರೆ ನಿವಾಸಿ ಅಬ್ದುಲ್ ರವೂಫ್ (30), ತೊಕ್ಕೊಟ್ಟು ಬಳಿಯ ಚೆಂಬುಗುಡ್ಡೆ ನಿವಾಸಿ ಶರೀಫ್ ಅಲಿಯಾಸ್ ಅಮಿನ್ (34), ಮತ್ತು ಮಾದಕ ವಸ್ತು ಖರೀದಿಸಲು ಬಂದಿದ್ದ ಕಿನ್ಯಾ ಗ್ರಾಮದ ಸಂಕೇಶ್ ಹೌಸ್ ನಿವಾಸಿ ನಿಯಾಝ್ (24) ಎಂದು ಗುರುತಿಸಲಾಗಿದೆ. ಈ ಇಬ್ಬರು ಪ್ರಮುಖ ಮಾರಾಟಗಾರರು ನಿಯಾಝ್ಗೆ ಡ್ರಗ್ಸ್ ವಿತರಿಸಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ, ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಪಣಂಬೂರಿನ ಬೆಂಗ್ರೆ ನಿವಾಸಿ ಸಲಾಂ ಎಂಬ ಮತ್ತೊಬ್ಬ ಪ್ರಮುಖ ಆರೋಪಿ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಬಂಧಿತರ ವಿರುದ್ಧ ಎನ್ ಡಿಪಿಎಸ್ ಕಾಯ್ದೆ, 1985ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಡ್ರಗ್ಸ್ ಮಾರಾಟಕ್ಕೆ ಆರೋಪಿಗಳು ಬಳಸಿದ್ದ ಟೊಯೋಟಾ ಗ್ಲಾಂಜಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಂಡಿಎಂಎ ಜೊತೆಗೆ, ಪೊಲೀಸರು ಮೂರು ಮೊಬೈಲ್ ಫೋನ್ಗಳು, ₹2,500 ನಗದು, ಡ್ರಗ್ಸ್ ತೂಕ ಮಾಡಲು ಬಳಸುತ್ತಿದ್ದ ಸೂಕ್ಷ್ಮ ತೂಕಮಾಪನ ಮತ್ತು ಮಾದಕ ವಸ್ತುವನ್ನು ಪ್ಯಾಕ್ ಮಾಡಲು ಬಳಸುತ್ತಿದ್ದ ಝಿಪ್ಲಾಕ್ ಕವರ್ಗಳನ್ನೂ ಸಹ ವಶಪಡಿಸಿಕೊಂಡಿದ್ದಾರೆ. ಗಡಿಭಾಗವನ್ನು ಉಪಯೋಗಿಸಿಕೊಂಡು ನಡೆಯುತ್ತಿದ್ದ ಈ ಡ್ರಗ್ಸ್ ದಂಧೆಯ ಮೂಲಗಳು ಮತ್ತು ಇತರ ಸಹಚರರ ಬಗ್ಗೆ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









