
ಮಂಗಳೂರು : ದಕ್ಷಿಣ ಕನ್ನಡದ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಕೊಂಡಾಣ ಪಿಲಿಚಾಮುಂಡಿ ಮತ್ತು ಬಂಟ ದೈವಸ್ಥಾನದಲ್ಲಿ ಇಂದು ಮಹತ್ವದ ವಿದ್ಯಮಾನವೊಂದು ಜರುಗಿದೆ. ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರ ಹರಕೆ ನೇಮೋತ್ಸವದ ವಿಚಾರದಲ್ಲಿ ದೈವಾರಾಧಕ ತಮ್ಮಣ್ಣ ಶೆಟ್ಟಿ ವಿರುದ್ಧ ದೈವದ ಬಂಗಾರ ಕದ್ದಿದ್ದಾರೆ ಎಂದು ವೈಯಕ್ತಿಕ ಆರೋಪ ಮಾಡಿದ್ದ ರವಿ ಪ್ರಸನ್ನ ಅವರು, ಇಂದು ದೈವದ ಮುಂದೆ ಕ್ಷಮೆ ಯಾಚಿಸಿದ್ದಾರೆ. ತಮ್ಮಣ್ಣ ಶೆಟ್ಟಿ ಅವರು ನೀಡಿದ್ದ ಬಹಿರಂಗ ಸವಾಲಿನ ಬೆನ್ನಲ್ಲೇ, ಸುಮಾರು ನಲ್ವತ್ತು ಬೆಂಬಲಿಗರೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ರವಿ ಪ್ರಸನ್ನ, ದೈವಗಳೆದುರು ತಪ್ಪು ಕಾಣಿಕೆ ಹಾಕುವ ಮೂಲಕ ತಾವು ಆಡಿದ ಮಾತುಗಳನ್ನು ಅಧಿಕೃತವಾಗಿ ಹಿಂಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರವಿ ಪ್ರಸನ್ನ, ಕ್ಷೇತ್ರಕ್ಕೆ ಅಪಚಾರವಾಗಬಾರದು ಎಂಬ ದೃಷ್ಟಿಯಿಂದ ಮತ್ತು ತಂತ್ರಿಗಳ ಆಹ್ವಾನದ ಮೇರೆಗೆ ಇಲ್ಲಿಗೆ ಬಂದಿರುವುದಾಗಿ ತಿಳಿಸಿದರು. “ದೈವಗಳ ಅಸ್ತಿತ್ವ ಮತ್ತು ಆಚರಣೆಯ ಕುರಿತಾದ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟಿದ್ದೇನೆ, ಕೊಂಡಾಣ ಕ್ಷೇತ್ರದ ಹೆಸರನ್ನು ಈ ವಿವಾದದಲ್ಲಿ ಎಳೆತಂದಿದ್ದಕ್ಕೆ ಕ್ಷಮೆ ಕೇಳಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಮ್ಮಣ್ಣ ಶೆಟ್ಟಿ ಅವರು, ದೈವಾರಾಧನೆಯ ಪಾವಿತ್ರ್ಯತೆಗೆ ಧಕ್ಕೆ ಬಂದಾಗ ತಾವು ಧ್ವನಿ ಎತ್ತಿರುವುದಾಗಿಯೂ, ಯಾರೊಂದಿಗೂ ಸಂಘರ್ಷ ನಡೆಸುವ ಉದ್ದೇಶ ತಮಗಿಲ್ಲ ಎಂದೂ ಹೇಳಿದರು. ಅಲ್ಲದೆ, ದೈವಾರಾಧನೆಯನ್ನು ಸಿನಿಮಾ ಪ್ರಮೋಷನ್ಗೆ ಬಳಸುವುದರ ವಿರುದ್ಧ ಮತ್ತು ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳುವ ಬಗ್ಗೆ ಜನಜಾಗೃತಿ ಮುಂದುವರಿಸುವುದಾಗಿ ತಿಳಿಸಿದರು.
ಆದರೆ, ಈ ವಿವಾದ ಸೌಹಾರ್ದಯುತವಾಗಿ ಮುಕ್ತಾಯವಾಗುವ ಹಂತದಲ್ಲಿದ್ದಾಗ ಕ್ಷೇತ್ರದ ಅಂಗಣದಲ್ಲಿ ಅಹಿತಕರ ಘಟನೆಯೊಂದು ಸಂಭವಿಸಿತು. ಪತ್ರಿಕಾಗೋಷ್ಟಿ ಮುಗಿದ ಬೆನ್ನಲ್ಲೇ ಸಂದರ್ಶನಕ್ಕೆ ಮುಂದಾದ ಯೂಟ್ಯೂಬರ್ ಅಜಯ್ ಅಂಚನ್ ಅವರ ಮೇಲೆ ರವಿ ಪ್ರಸನ್ನ ಅವರ ಬೆಂಬಲಿಗರು ಹಲ್ಲೆಗೆ ಯತ್ನಿಸಿದರು. ಕ್ಷೇತ್ರದ ಆವರಣದಲ್ಲೇ ನಡೆದ ಈ ಗಲಾಟೆಯಿಂದಾಗಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಕ್ಷೇತ್ರದ ಆಡಳಿತ ಮಂಡಳಿ ಮತ್ತು ತಮ್ಮಣ್ಣ ಶೆಟ್ಟಿ ಅವರು ಅಜಯ್ ಅವರನ್ನು ಬೆಂಬಲಿಗರ ಪಡೆಯಿಂದ ರಕ್ಷಿಸಿ ಸುರಕ್ಷಿತವಾಗಿ ಕಳುಹಿಸಿಕೊಟ್ಟರು. ಭಕ್ತಿ ಮತ್ತು ನಂಬಿಕೆಯ ಕ್ಷೇತ್ರದಲ್ಲಿ ನಡೆದ ಈ ಹಲ್ಲೆ ಯತ್ನ ಮತ್ತು ಬೆಂಬಲಿಗರ ಉದ್ಧಟತನದ ವರ್ತನೆಯು ಈಗ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









