ಉಡುಪಿಯ : ಮಲ್ಪೆ ಸಮುದ್ರ ತೀರದಲ್ಲಿ ಕೃಷ್ಣನ ವಿಗ್ರಹವೊಂದು ಪವಾಡ ಸದೃಶವಾಗಿ ತೇಲಿ ಬಂದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಭಾನುವಾರ ಕೃಷ್ಣಮಠದಲ್ಲಿ ಆಯೋಜಿಸಲಾಗಿದ್ದ ಇಸ್ಕಾನ್ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾವಿರಾರು ಅನುಯಾಯಿಗಳು ಮಲ್ಪೆ ಕಡಲತೀರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಸಮುದ್ರದ ಅಲೆಗಳ ನಡುವೆ ವಿಗ್ರಹವೊಂದು ಕಾಣಿಸಿಕೊಂಡ ಕೂಡಲೇ ಭಕ್ತರು ಭಾವುಕರಾಗಿ, “ಉಡುಪಿ ಕೃಷ್ಣ ಕಡಲಲ್ಲೇ ಸಿಕ್ಕಿದಂತೆ ಮತ್ತೊಮ್ಮೆ ಪವಾಡ ಸಂಭವಿಸಿದೆ” ಎಂದು ಘೋಷಿಸುತ್ತಾ ವಿಗ್ರಹವನ್ನು ಸಂಭ್ರಮದಿಂದ ದಡಕ್ಕೆ ತಂದಿದ್ದಾರೆ.
ಇಸ್ಕಾನ್ ಭಕ್ತರು ಈ ವಿಗ್ರಹವನ್ನು ಕೃಷ್ಣನ ರೂಪವೆಂದೇ ಭಾವಿಸಿ ಕುಣಿದು ಕುಪ್ಪಳಿಸುತ್ತಾ ಅಲ್ಲಿಂದ ಕೊಂಡೊಯ್ದಿದ್ದಾರೆ. ಆದರೆ, ಈ ‘ಪವಾಡ’ದ ಹಿಂದಿನ ಸತ್ಯಾಂಶ ವಿಭಿನ್ನವಾಗಿದೆ. ತಜ್ಞರು ಮತ್ತು ಸ್ಥಳೀಯರ ಪರಿಶೀಲನೆಯ ಪ್ರಕಾರ, ಇದು ಕೃಷ್ಣನ ವಿಗ್ರಹವಲ್ಲ, ಬದಲಾಗಿ ದೇಗುಲಗಳ ಪ್ರವೇಶ ದ್ವಾರದಲ್ಲಿ ಕಂಡುಬರುವ ‘ಜಯ-ವಿಜಯ’ರ ಪೈಕಿ ಒಂದು ವಿಗ್ರಹವಾಗಿದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ವಿಗ್ರಹಗಳು ಭಿನ್ನಗೊಂಡಾಗ ಅಥವಾ ಹಳೆಯದಾದಾಗ ಅವುಗಳನ್ನು ಶಾಸ್ತ್ರೋಕ್ತವಾಗಿ ಸಮುದ್ರ ಅಥವಾ ನದಿಗಳಲ್ಲಿ ವಿಸರ್ಜಿಸುವ ಸಂಪ್ರದಾಯವಿದೆ. ಹೀಗೆ ವಿಸರ್ಜಿಸಲಾಗಿದ್ದ ವಿಗ್ರಹವು ಅಲೆಗಳ ಹೊಡೆತಕ್ಕೆ ಸಿಲುಕಿ ದಡಕ್ಕೆ ತೇಲಿ ಬಂದಿದೆ ಎನ್ನಲಾಗಿದೆ.
ಸದ್ಯ ಭಕ್ತರು ವಿಗ್ರಹದೊಂದಿಗೆ ಸಂಭ್ರಮಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, ಭಕ್ತಿ ಮತ್ತು ವಾಸ್ತವದ ನಡುವಿನ ಚರ್ಚೆಗೆ ವೇದಿಕೆಯಾಗಿದೆ. ಭಕ್ತರು ತಮ್ಮ ಶ್ರದ್ಧೆಯಿಂದ ಇದನ್ನು ಪವಾಡ ಎಂದು ಕರೆದಿದ್ದರೂ, ಮೇಲ್ನೋಟಕ್ಕೆ ಇದು ವಿಸರ್ಜಿತಗೊಂಡ ದ್ವಾರಪಾಲಕರ ವಿಗ್ರಹ ಎಂಬುದು ಸ್ಪಷ್ಟವಾಗುತ್ತಿದೆ. ಏನೇ ಇರಲಿ, ಮಲ್ಪೆ ಕಡಲತೀರದಲ್ಲಿ ನಡೆದ ಈ ಆಕಸ್ಮಿಕ ವಿದ್ಯಮಾನವು ಸಾವಿರಾರು ಜನರಲ್ಲಿ ಭಕ್ತಿಯ ಅಲೆ ಎಬ್ಬಿಸಿರುವುದಂತೂ ಸುಳ್ಳಲ್ಲ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









