ಮಂಗಳೂರು : ಮಂಗಳೂರಿನ ಹಳೆ ಬಂದರ್ನ ಉಪ್ಪುಧಕ್ಕೆಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ದುರಂತವೊಂದರಲ್ಲಿ ಮೀನುಗಾರಿಕಾ ಬೋಟ್ನ ಕಾರ್ಮಿಕರೊಬ್ಬರು ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಚತ್ತೀಸ್ಗಢ ಮೂಲದ ಪ್ರಹ್ಲಾದ್ ಚೌಹಾನ್ (33) ಮೃತಪಟ್ಟ ದುರ್ದೈವಿ. ಸುಮಾರು ಒಂದು ವರ್ಷದ ಹಿಂದೆ ಬದುಕು ಅರಸಿ ಮಂಗಳೂರಿಗೆ ಬಂದಿದ್ದ ಇವರು ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
ಘಟನೆಯ ವಿವರದಂತೆ, ಸೋಮವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ‘ಹಸನ್ ಅಲ್ ಬಹಾರ್’ ಎಂಬ ಹೆಸರಿನ ಪರ್ಸಿನ್ ಬೋಟ್ ಅನ್ನು ದಕ್ಕೆಗೆ ತಂದು ಲಂಗರು ಹಾಕಲಾಗುತ್ತಿತ್ತು. ಈ ಸಂದರ್ಭದಲ್ಲಿ ಬೋಟ್ನ ಹಗ್ಗವನ್ನು ಕಟ್ಟಲು ಪ್ರಯತ್ನಿಸುತ್ತಿದ್ದ ಪ್ರಹ್ಲಾದ್ ಅವರು ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ನಿಯಂತ್ರಣ ತಪ್ಪಿ ನೀರಿನ ಸೆಳವಿಗೆ ಸಿಲುಕಿದ ಅವರನ್ನು ತಕ್ಷಣವೇ ಗಮನಿಸಿದ ಸಹೋದ್ಯೋಗಿ ಮೀನುಗಾರರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ನೀರಿನಿಂದ ತಕ್ಷಣವೇ ಮೇಲೆತ್ತಲಾಯಿತಾದರೂ, ಪ್ರಹ್ಲಾದ್ ಅವರು ಅದಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಮೃತದೇಹವನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ರವಾನಿಸಿ ಶವಪರೀಕ್ಷೆ ನಡೆಸಲಾಗಿದ್ದು, ಬಳಿಕ ವಿಮಾನದ ಮೂಲಕ ಅವರ ತವರೂರಾದ ಚತ್ತೀಸ್ಗಢದ ಜಸ್ಪುರ್ ಜಿಲ್ಲೆಯ ಬರ್ಖಾಸ್ ಪಾಲಿ ಗ್ರಾಮಕ್ಕೆ ಕಳುಹಿಸಿಕೊಡಲಾಗಿದೆ. ಈ ದುರಂತಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









