ಬೆಂಗಳೂರು : ಬೆಂಗಳೂರಿನಲ್ಲಿ ನಡೆದಿದ್ದ ಮಂಗಳೂರು ಮೂಲದ ಸಾಫ್ಟ್ವೇರ್ ಇಂಜಿನಿಯರ್ ಶರ್ಮಿಳಾ (35) ಅವರ ಸಾವು ಬೆಂಕಿ ಅವಘಡವಲ್ಲ, ಬದಲಾಗಿ ಪಕ್ಕದ ಮನೆಯ ವಿದ್ಯಾರ್ಥಿ ನಡೆಸಿದ ಕ್ರೂರ ಕೊಲೆ ಎಂಬ ಕಹಿಸತ್ಯ ತನಿಖೆಯಲ್ಲಿ ಬಯಲಾಗಿದೆ. ಲೈಂಗಿಕವಾಗಿ ಸಹಕರಿಸಲು ನಿರಾಕರಿಸಿದ್ದಕ್ಕೆ ಕಾವೂರು ನಿವಾಸಿ ಶರ್ಮಿಳಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸಲು ಅವರ ಫ್ಲಾಟ್ಗೆ ಬೆಂಕಿ ಹಚ್ಚಿದ್ದ ಕೇರಳ ಮೂಲದ ಪಿಯುಸಿ ವಿದ್ಯಾರ್ಥಿ ಕರ್ಣಲ್ ಕುರೈ (18) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜನವರಿ 3ರಂದು ರಾತ್ರಿ ಶರ್ಮಿಳಾ ಅವರ ಸುಬ್ರಹ್ಮಣ್ಯ ಲೇಔಟ್ನ ಫ್ಲಾಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದಾಗ, ಅದು ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದ ಅಪಘಾತ ಎಂದು ಭಾವಿಸಲಾಗಿತ್ತು. ಆದರೆ ಶರ್ಮಿಳಾ ಅವರ ಸ್ನೇಹಿತರು ವ್ಯಕ್ತಪಡಿಸಿದ ಅನುಮಾನದಿಂದ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಶಾಕಿಂಗ್ ಮಾಹಿತಿ ಲಭ್ಯವಾಗಿದೆ. ಘಟನೆಯ ದಿನ ರಾತ್ರಿ ಆರೋಪಿ ಕುರೈ ಕಿಟಕಿಯ ಮೂಲಕ ಶರ್ಮಿಳಾ ಅವರ ಮನೆಗೆ ನುಗ್ಗಿದ್ದ. ಈ ವೇಳೆ ಲೈಂಗಿಕ ಬೇಡಿಕೆಯನ್ನಿಟ್ಟ ಆತನನ್ನು ಶರ್ಮಿಳಾ ವಿರೋಧಿಸಿದಾಗ, ಆಕೆಯ ಬಾಯಿ ಮತ್ತು ಮೂಗು ಒತ್ತಿ ಹಿಡಿದು ಅರೆ ಪ್ರಜ್ಞಾವಸ್ಥೆಗೆ ತಂದು ಹತ್ಯೆಗೈದಿದ್ದಾನೆ. ಬಳಿಕ ಕೃತ್ಯವನ್ನು ಮುಚ್ಚಿಹಾಕಲು ಫ್ಲಾಟ್ಗೆ ಬೆಂಕಿ ಹಚ್ಚಿ, ಶರ್ಮಿಳಾ ಅವರ ಮೊಬೈಲ್ನೊಂದಿಗೆ ಪರಾರಿಯಾಗಿದ್ದ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಕೊಲೆ, ಅತ್ಯಾಚಾರ ಯತ್ನ ಹಾಗೂ ಸಾಕ್ಷ್ಯ ನಾಶದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









