ಮಂಗಳೂರು : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರು ಚರ್ಚ್ ಹಾಲ್ನಲ್ಲಿ ಕಳೆದ ಜನವರಿ 6 ರಂದು ನಡೆದ ‘ರೋಸ್’ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಹಾಗೂ ಮಾಜಿ ಗ್ರಾ.ಪಂ ಸದಸ್ಯೆ ಸುನಿತಾ ಲೋಬೊ ಅವರ ಮೇಲೆ ವಲೇರಿಯನ್ ಡಿಸೋಜ ಎಂಬಾತ ಬಿಯರ್ ಬಾಟಲಿಯಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಹಳೆಯ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಹಲ್ಲೆಯಿಂದಾಗಿ ಹಣೆಗೆ ಗಂಭೀರ ಗಾಯಗೊಂಡು ಸುನಿತಾ ಅವರು ಸುಮಾರು ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಆರೋಪಿ ವಲೇರಿಯನ್ ಡಿಸೋಜ ತಾನು ಕೂಡ ಹಲ್ಲೆಗೊಳಗಾಗಿರುವುದಾಗಿ ಪ್ರತಿ ದೂರು ದಾಖಲಿಸಿದ್ದು, ಕಳೆದ ಹತ್ತು ದಿನಗಳಿಂದ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಾಗುವ ಮೂಲಕ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾನೆ. ಘಟನೆಯ ಸಿಸಿಟಿವಿ ಸಾಕ್ಷ್ಯ ಲಭ್ಯವಿದ್ದರೂ ಕೊಣಾಜೆ ಪೊಲೀಸರು ಆರೋಪಿಯ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಹಲ್ಲೆಯ ಹಿಂದೆ 2015ರ ಪಂಚಾಯತ್ ಚುನಾವಣೆ ಸಮಯದ ರಾಜಕೀಯ ಹಗೆತನವೂ ಇರುವುದು ಸುನಿತಾ ಅವರ ಹೇಳಿಕೆಯಿಂದ ತಿಳಿದುಬಂದಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಪೊಲೀಸರ ಮೃದು ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಾಕ್ಷ್ಯಗಳು ಕಣ್ಣೆದುರಿಗಿದ್ದರೂ ಕಠಿಣ ಕ್ರಮ ಕೈಗೊಳ್ಳದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಡುವೆ ಉಳ್ಳಾಲ ಮಹಿಳಾ ಕಾಂಗ್ರೆಸ್ ನಿಯೋಗವು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









