ಉಡುಪಿ : ಉಡುಪಿ ಜಿಲ್ಲಾಧಿಕಾರಿಗಳು ಕೇಸರಿ ಧ್ವಜ ಹಿಡಿದಿರುವ ಕುರಿತು ರಮಾನಾಥ್ ರೈ ಅವರು ನೀಡಿದ್ದ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಸ್ಪಷ್ಟೀಕರಣ ನೀಡಿರುವ ಅವರು, “ನನ್ನ ಹೇಳಿಕೆ ದೇವಸ್ಥಾನದ ಕಾರ್ಯಕ್ರಮ ಅಥವಾ ಧಾರ್ಮಿಕ ನಂಬಿಕೆಗಳ ವಿರುದ್ಧವಾಗಿಲ್ಲ. ಬದಲಾಗಿ, ಅಧಿಕಾರಿಯೊಬ್ಬರು ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಯಾವುದೇ ನಿರ್ದಿಷ್ಟ ಧರ್ಮದ ಧ್ವಜವನ್ನು ಹಿಡಿಯುವುದು ಅಥವಾ ಹಾರಿಸುವುದು ಸರಿಯಲ್ಲ ಎಂಬ ಅರ್ಥದಲ್ಲಿ ನಾನು ಮಾತನಾಡಿದ್ದೇನೆ” ಎಂದು ತಿಳಿಸಿದ್ದಾರೆ.
ಅಪಪ್ರಚಾರದ ವಿರುದ್ಧ ರೈ ಕಿಡಿ
ಜಿಲ್ಲಾ ಮಟ್ಟದ ಅಧಿಕೃತ ಕಾರ್ಯಕ್ರಮಗಳಲ್ಲಿ ಅಥವಾ ಸಾರ್ವಜನಿಕ ಸಮಾರಂಭಗಳಲ್ಲಿ ಜಿಲ್ಲಾಧಿಕಾರಿಯಾದವರು ಸಮಾನತೆಯನ್ನು ಕಾಪಾಡಿಕೊಳ್ಳಬೇಕು. ಯಾವುದೇ ಒಂದು ಧರ್ಮದ ಸಂಕೇತಗಳನ್ನು ಪ್ರದರ್ಶಿಸಬಾರದು ಎಂಬುದು ನನ್ನ ಆಶಯವೇ ಹೊರತು, ದೇವಸ್ಥಾನದ ವಿಚಾರವನ್ನಲ್ಲ. ಆದರೆ ಕೆಲವರು ನನ್ನ ಹೇಳಿಕೆಯನ್ನು ತಿರುಚಿ ದೇವಸ್ಥಾನದ ವಿರುದ್ಧವಾಗಿ ನೀಡಿದ ಹೇಳಿಕೆ ಎಂಬಂತೆ ಬಿಂಬಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋ
ಕಳೆದ ಬುಧವಾರ ಜಿಲ್ಲಾಧಿಕಾರಿಗಳು ಧ್ವಜ ಹಿಡಿದಿದ್ದನ್ನು ಪ್ರಶ್ನಿಸಿ ರಮಾನಾಥ್ ರೈ ಅವರು ನೀಡಿದ್ದ ಹೇಳಿಕೆಯ ವಿಡಿಯೋ ತುಣುಕುಗಳು ವ್ಯಾಪಕವಾಗಿ ವೈರಲ್ ಆಗಿದ್ದವು. ಇದು ಉಡುಪಿ ಜಿಲ್ಲೆಯಾದ್ಯಂತ ಪರ-ವಿರೋಧದ ಚರ್ಚೆಗಳಿಗೆ ಕಾರಣವಾಗಿತ್ತು. ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಮಾಜಿ ಸಚಿವರು ತಮ್ಮ ನಿಲುವನ್ನು ಸ್ಪಷ್ಟಪಡಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









