ಉಡುಪಿ : ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ರಕ್ಷಣೆ ಮತ್ತು ಕಡಲ ಪ್ರವಾಸೋದ್ಯಮದಲ್ಲಿ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಮಣಿಪಾಲದ ರಜತಾದ್ರಿಯಲ್ಲಿ ನಡೆದ ಕಡಲ ತೀರದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿ ಕಾರ್ಯಾಚರಿಸುವ ಎಲ್ಲಾ ಪ್ರವಾಸಿ ಬೋಟ್ಗಳು ಬಂದರು ಇಲಾಖೆ, ಪೊಲೀಸ್, ಕರಾವಳಿ ಕಾವಲು ಪಡೆ, ಸ್ಥಳೀಯ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆದ ನಂತರವೇ ಕಡಲಿಗೆ ಇಳಿಯಬೇಕು ಎಂದು ಸ್ಪಷ್ಟಪಡಿಸಿದರು. ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಮಾಲಕರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಸಂಚರಿಸುವ ಪ್ರತಿಯೊಂದು ಪ್ರವಾಸಿ ಬೋಟುಗಳು ಮುಂದಿನ 45 ದಿನಗಳ ಒಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪ್ರವಾಸೋದ್ಯಮ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಈಗಾಗಲೇ ನೋಂದಣಿಯಾಗಿರುವ ಬೋಟ್ಗಳು ಪ್ರತಿ ವರ್ಷ ತಮ್ಮ ಪರವಾನಿಗೆಯನ್ನು ನವೀಕರಿಸಿಕೊಳ್ಳುವುದು ಕಡ್ಡಾಯವಾಗಿದೆ. ಅನುಮತಿ ಪಡೆಯದ ಅಥವಾ ನಿಯಮ ಉಲ್ಲಂಘಿಸುವ ಬೋಟ್ಗಳ ಸಂಚಾರಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದರೊಂದಿಗೆ, ಬೋಟ್ ಮಾಲಕರು ಹಾಗೂ ಚಾಲಕರಿಗೆ ಸುರಕ್ಷತಾ ವಿಧಾನಗಳು ಮತ್ತು ವಿಮೆ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ವಿಶೇಷ ಕಾರ್ಯಾಗಾರಗಳನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜೀವ ರಕ್ಷಕ ಸಿಬ್ಬಂದಿಗಳು ಸಹ ತುರ್ತು ಸಂದರ್ಭಗಳಲ್ಲಿ ಅನುಸರಿಸಬೇಕಾದ ಜೀವ ರಕ್ಷಣಾ ತಂತ್ರಗಳ ಬಗ್ಗೆ ಅರಿವು ಹೊಂದಿರಬೇಕು ಎಂದು ಅವರು ಪ್ರತಿಪಾದಿಸಿದರು.
ಪ್ರವಾಸಿಗರ ಜೀವದ ಹಿತದೃಷ್ಟಿಯಿಂದ ಬೋಟ್ಗಳಲ್ಲಿ ಲೈಫ್ ಜಾಕೆಟ್ ಬಳಕೆಯನ್ನು ಗಂಭೀರವಾಗಿ ಪರಿಗಣಿಸಲು ಸೂಚಿಸಲಾಗಿದೆ. ಪ್ರತಿಯೊಬ್ಬ ಪ್ರವಾಸಿಗ ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಿದ ನಂತರವಷ್ಟೇ ಬೋಟ್ ಚಲಿಸಬೇಕು ಎಂಬ ನಿಯಮವನ್ನು ಜಾರಿಗೆ ತರಲು ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ. ಇದಕ್ಕಾಗಿ ಬೋಟ್ಗಳಲ್ಲಿ ಲೈಫ್ ಜಾಕೆಟ್ ಧರಿಸುವ ಕುರಿತು ಪ್ರೀ-ರೆಕಾರ್ಡೆಡ್ ಆಡಿಯೋ ಸಂದೇಶಗಳನ್ನು ಪ್ರಸಾರ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು. ಅಲ್ಲದೆ, ಪ್ರವಾಸಿ ತಾಣಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲು ಮತ್ತು ಕರಪತ್ರಗಳ ಮೂಲಕ ಜಾಗೃತಿ ಮೂಡಿಸಲು ಪ್ರವಾಸೋದ್ಯಮ ಇಲಾಖೆಗೆ ಸೂಚನೆ ನೀಡಲಾಗಿದೆ. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೇರಿದಂತೆ ಪ್ರಮುಖ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದು, ಸುರಕ್ಷತಾ ಕ್ರಮಗಳ ಅನುಷ್ಠಾನಕ್ಕೆ ಬದ್ಧತೆ ವ್ಯಕ್ತಪಡಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









