ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಗುಂಡೇಟಿನಿಂದ 17 ವರ್ಷದ ಬಾಲಕ ಮೋಕ್ಷ ಎಂಬಾತ ಮೃತಪಟ್ಟ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ತೀವ್ರ ಕುತೂಹಲ ಹಾಗೂ ನಿಗೂಢತೆಗೆ ಕಾರಣವಾಗಿದೆ. ಕಳೆದ ಜನವರಿ 24ರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಮೃತ ಬಾಲಕನ ಅಂತ್ಯಕ್ರಿಯೆಯನ್ನು ಜನವರಿ 25ರ ರಾತ್ರಿ ಕಾಸರಗೋಡಿನ ಪೆರ್ಲದ ಎಣ್ಮಕಜೆಯಲ್ಲಿರುವ ಆತನ ತಾಯಿಯ ಮನೆಯಲ್ಲಿ ನೆರವೇರಿಸಲಾಗಿದೆ. ಇನ್ನೊಂದೆಡೆ ಘಟನೆಯಲ್ಲಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ತಂದೆ ವಸಂತ ಅಮೀನ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರ ದೇಹದಲ್ಲಿ ಗುಂಡಿನ ತುಣುಕುಗಳು ಪತ್ತೆಯಾಗಿವೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ ಈ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಆರಂಭಿಕ ತನಿಖೆಯ ವೇಳೆ ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂಬ ಪ್ರಾಥಮಿಕ ಮಾಹಿತಿಯನ್ನು ನೀಡಿದ್ದರು. ಮನೆಯಲ್ಲಿ ನಡೆದ ಕೌಟುಂಬಿಕ ಕಲಹದ ವೇಳೆ ಮೋಕ್ಷ ತನ್ನ ತಂದೆಯ ಹೊಟ್ಟೆಗೆ ಚಾಕುವಿನಿಂದ ಇರಿದು, ಬಳಿಕ ತಂದೆಯ ಹೆಸರಿನಲ್ಲಿದ್ದ ಪರವಾನಗಿ ಹೊಂದಿದ ಬಂದೂಕಿನಿಂದ ಮುಖಕ್ಕೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂಬ ವಾದ ಕೇಳಿಬಂದಿತ್ತು. ಘಟನಾ ಸ್ಥಳಕ್ಕೆ ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ (FSL) ಅಧಿಕಾರಿಗಳು ಭೇಟಿ ನೀಡಿ ಸುಮಾರು ಏಳು ಗಂಟೆಗಳ ಕಾಲ ಸುದೀರ್ಘ ಮಹಜರು ನಡೆಸಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ನಂತರ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಆದರೆ, ಪ್ರಕರಣದ ದಿಕ್ಕನ್ನೇ ಬದಲಿಸುವಂತೆ ಮೃತ ಬಾಲಕನ ತಾಯಿ ಜಯಶ್ರೀ ಅವರು ತನ್ನ ಪತಿ ವಸಂತ ಅಮೀನ್ ವಿರುದ್ಧವೇ ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ತನ್ನ ಪತಿಯೇ ಮಗ ಮೋಕ್ಷನನ್ನು ಕೊಲೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿರುವುದು ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ. ತಾಯಿಯ ಈ ದೂರು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಸತ್ಯಾಸತ್ಯತೆಯನ್ನು ತಿಳಿಯಲು ಪೊಲೀಸರು ವಿಸ್ತೃತ ತನಿಖೆ ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ತಂದೆಯ ಹೇಳಿಕೆ ಹಾಗೂ ಎಫ್ಎಸ್ಎಲ್ ವರದಿ ಬಂದ ನಂತರವಷ್ಟೇ ಈ ಸಾವಿನ ಹಿಂದಿನ ಅಸಲಿ ರಹಸ್ಯ ಬಯಲಾಗಬೇಕಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









