ಮಂಗಳೂರು : ದಕ್ಷಿಣ ಕನ್ನಡದ ಪ್ರಸಿದ್ಧ ಪ್ರವಾಸಿ ಕೇಂದ್ರವಾದ ಪಿಲಿಕುಳ ನಿಸರ್ಗಧಾಮದ ಮೃಗಾಲಯದಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಪ್ರಾಣಿಗಳ ಸ್ಥಿತಿ ಶೋಚನೀಯವಾಗಿದೆ. ವನ್ಯಜೀವಿ ಸಂರಕ್ಷಕ ಭುವನ್ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು, ಪ್ರಾಣಿಗಳ ದಯನೀಯ ಸ್ಥಿತಿಯ ಫೋಟೋಗಳನ್ನು ಕಂಡು ತೀವ್ರ ಗರಂ ಆಗಿದೆ. “ಮೂಕ ಪ್ರಾಣಿಗಳ ಸ್ಥಿತಿ ಹೀಗಿದ್ದರೆ ತಕ್ಷಣವೇ ಪಾರ್ಕ್ ಬಂದ್ ಮಾಡಿ” ಎಂದು ಸರ್ಕಾರಕ್ಕೆ ನ್ಯಾಯಾಧೀಶರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಚಾರಣೆ ವೇಳೆ ಮೃಗಾಲಯದ ಆವರಣದಲ್ಲಿರುವ ತುಕ್ಕು ಹಿಡಿದ ಪಂಜರಗಳು, ಅಶುಚಿಯಾದ ಪರಿಸರ ಮತ್ತು ಪ್ರಾಣಿಗಳಿಗೆ ಸರಿಯಾದ ಭದ್ರತೆ ಇಲ್ಲದಿರುವ ಅಂಶಗಳು ಬೆಳಕಿಗೆ ಬಂದಿವೆ. ಪ್ರಾಣಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಅವು ಸೊರಗುತ್ತಿರುವುದು ಹಾಗೂ ಮಲೀನಗೊಂಡ ನೀರನ್ನು ಕುಡಿಯುವಂತಾಗಿರುವುದು ನ್ಯಾಯಾಲಯದ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, 2025ರ ಡಿಸೆಂಬರ್ನಲ್ಲಿಯೇ ಮೃಗಾಲಯದ ಪರವಾನಗಿ ಅವಧಿ ಮುಗಿದಿದ್ದು, ಪ್ರಸ್ತುತ ಪರವಾನಗಿ ಇಲ್ಲದೆಯೇ ಕಾರ್ಯಾಚರಿಸುತ್ತಿದೆಯೇ ಎಂಬ ಸಂಶಯವನ್ನೂ ನ್ಯಾಯಾಲಯ ವ್ಯಕ್ತಪಡಿಸಿದೆ.
ಸೆಂಟ್ರಲ್ ಝೂ ಅಥಾರಿಟಿ ನೀಡಿದ ಶೋಕಾಸ್ ನೋಟಿಸ್ಗೂ ಪಿಲಿಕುಳ ಆಡಳಿತ ಮಂಡಳಿ ಸೂಕ್ತವಾಗಿ ಸ್ಪಂದಿಸದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ. ಕರಾವಳಿಯ ಪ್ರಮುಖ ಶೈಕ್ಷಣಿಕ ಹಾಗೂ ಪ್ರವಾಸಿ ಕೇಂದ್ರವೆನಿಸಿದ ಪಿಲಿಕುಳದ ಈ ದುಸ್ಥಿತಿ ಕಂಡು ಪ್ರಾಣಿ ಪ್ರೇಮಿಗಳಲ್ಲಿ ತೀವ್ರ ಆತಂಕ ಮೂಡಿದೆ. ಅಧಿಕಾರಿಗಳ ನಿರ್ಲಕ್ಷ್ಯ ಹೀಗೆಯೇ ಮುಂದುವರಿದರೆ ಮಕ್ಕಳ ಅಚ್ಚುಮೆಚ್ಚಿನ ತಾಣಕ್ಕೆ ಬೀಗ ಬೀಳುವುದು ಖಚಿತ ಎಂಬಂತಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









