ಮಂಗಳೂರು : ರಾಜ್ಯ ಸರ್ಕಾರ ಮಂಡಿಸಿರುವ ದ್ವೇಷ ಭಾಷಣ ತಡೆ ಮಸೂದೆಗೆ ರಾಜ್ಯಪಾಲರು ಸಹಿ ಹಾಕದ ವಿಚಾರವನ್ನು ಬೆಂಬಲಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಸರ್ಕಾರ ಕಳುಹಿಸುವ ಪ್ರತಿಯೊಂದು ಮಸೂದೆಗೂ ರಾಜ್ಯಪಾಲರು ಸಹಿ ಹಾಕಲೇಬೇಕು ಎಂಬ ನಿಯಮವಿಲ್ಲ ಎಂದು ತಿಳಿಸಿದರು. ಈ ಮಸೂದೆಯು ಮುಂದಿನ ದಿನಗಳಲ್ಲಿ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಬಳಕೆಯಾಗುವ ಸಾಧ್ಯತೆಯಿದ್ದು, ಇದು ಕೇವಲ ರಾಜಕಾರಣಿಗಳಿಗಲ್ಲದೆ ಪತ್ರಕರ್ತರಿಗೂ ದೊಡ್ಡ ಮಟ್ಟದ ಸಮಸ್ಯೆಯನ್ನು ತಂದೊಡ್ಡಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಕಾನೂನು ದುರುಪಯೋಗವಾಗುವ ಭೀತಿಯಿಂದಲೇ ರಾಜ್ಯಪಾಲರು ಇದನ್ನು ವಿರೋಧಿಸಿದ್ದಾರೆ ಎಂದರು.
ಇದೇ ವೇಳೆ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ಅವರು, ಪ್ರಕರಣವು ಪ್ರಸ್ತುತ ತನಿಖಾ ಹಂತದಲ್ಲಿದೆ. ಯಾರು ಬೇಕಾದರೂ ಆರೋಪಗಳನ್ನು ಮಾಡಬಹುದು, ಆದರೆ ಈಗಲೇ ಅದರ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದು ತನಿಖೆಯ ಹಾದಿ ತಪ್ಪಿಸಿದಂತಾಗುತ್ತದೆ. ಸತ್ಯಾಸತ್ಯತೆ ತಿಳಿಯಲು ಪೂರ್ಣ ಪ್ರಮಾಣದ ತನಿಖೆಯಾಗಲಿ ಎಂದು ಅವರು ತಿಳಿಸಿದರು.
ಇನ್ನು ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸುವಂತೆ ಮೋಹನ್ ದಾಸ್ ಪೈ ಅವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಕಟೀಲ್, ಅವರು ಯಾವ ಹಿನ್ನೆಲೆಯಲ್ಲಿ ಈ ಮಾತು ಹೇಳಿದ್ದಾರೋ ತಿಳಿದಿಲ್ಲ. ಆದರೆ ಹಿಂದಿನಂತೆ ಈಗ ಮನಬಂದಂತೆ ದಾಳಿಗಳು ನಡೆಯುತ್ತಿಲ್ಲ. ತೆರಿಗೆ ಇಲಾಖೆಯು ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಅದು ಬಿಜೆಪಿಯವರ ಮೇಲೂ ದಾಳಿ ನಡೆಸಿದೆ. ಆದಾಯ ತೆರಿಗೆ ಇಲಾಖೆಯ ಕ್ರಮಗಳನ್ನು ರಾಜಕೀಯ ದ್ವೇಷಕ್ಕೆ ಬಳಸಲಾಗುತ್ತಿದೆ ಎಂದು ಹೇಳುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









