ಮಂಗಳೂರು : ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆ ಕಂಬಳಕ್ಕೆ ಇದೀಗ ಚಿನ್ನದ ದರ ಏರಿಕೆಯ ಬಿಸಿ ತಟ್ಟಿದೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದು ಕಂಬಳ ಕೂಟಗಳ ಆಯೋಜಕರ ಮೇಲೆ ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ. ಕಂಬಳದಲ್ಲಿ ವಿಜೇತ ಕೋಣಗಳ ಮಾಲೀಕರಿಗೆ ಬಹುಮಾನವಾಗಿ ಚಿನ್ನದ ಪದಕಗಳನ್ನು ನೀಡುವ ಸಂಪ್ರದಾಯವಿರುವುದರಿಂದ, ಪ್ರಸ್ತುತ ಬೆಲೆ ಏರಿಕೆಯು ಸಂಘಟನಾ ವೆಚ್ಚವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಈ ಸವಾಲಿನ ನಡುವೆಯೂ ಸಂಪ್ರದಾಯವನ್ನು ಕೈಬಿಡದೆ ಮುಂದುವರಿಸಲು ಕಂಬಳ ಸಮಿತಿಗಳು ನಿರ್ಧರಿಸಿವೆ.
ಈ ಕುರಿತು ಮಾಹಿತಿ ನೀಡಿದ ಕಂಬಳ ಸಮಿತಿಯ ಅಧ್ಯಕ್ಷ ಐಕಳಬಾವಾ ದೇವಿಪ್ರಸಾದ್ ಶೆಟ್ಟಿ ಅವರು, ಕಂಬಳ ಮತ್ತು ಚಿನ್ನಕ್ಕೆ ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದ್ದಾರೆ. ಕೋಣಗಳ ಯಜಮಾನರು ಅವುಗಳನ್ನು ಪ್ರೀತಿಯಿಂದ ಸಾಕಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವುದು ಚಿನ್ನದ ಪದಕದ ಗೌರವಕ್ಕಾಗಿ. ಹೀಗಾಗಿ ಎಷ್ಟೇ ಕಷ್ಟವಾದರೂ ಪ್ರಥಮ ಸ್ಥಾನಕ್ಕೆ ಒಂದು ಪವನ್ ಹಾಗೂ ದ್ವಿತೀಯ ಸ್ಥಾನಕ್ಕೆ ಅರ್ಧ ಪವನ್ ಚಿನ್ನದ ಪದಕ ನೀಡುವ ಪದ್ಧತಿಯನ್ನು ಮುಂದುವರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೆಚ್ಚುತ್ತಿರುವ ಆರ್ಥಿಕ ಹೊರೆಯನ್ನು ನಿಭಾಯಿಸಲು ಸರ್ಕಾರವು ಬಜೆಟ್ನಲ್ಲಿ ಕಂಬಳಕ್ಕೆ 5 ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕು ಎಂದು ಸಮಿತಿ ಮನವಿ ಮಾಡಿದೆ. ಒಂದು ಕಂಬಳ ಕೂಟದ ಆಯೋಜನೆಗೆ 40 ರಿಂದ 50 ಲಕ್ಷ ರೂಪಾಯಿ ವೆಚ್ಚವಾಗುತ್ತಿದ್ದು, ಅನುದಾನದ ಅಗತ್ಯತೆ ಹೆಚ್ಚಿದೆ. ಈ ನಡುವೆ ಐಪಿಎಲ್ ಮಾದರಿಯಲ್ಲಿ ಬೆಂಗಳೂರು, ಮುಂಬೈ ಹಾಗೂ ದುಬೈ ಉದ್ಯಮಿಗಳನ್ನು ‘ಮೆಗಾ ಸ್ಪಾನ್ಸರ್’ಗಳಾಗಿ ಆಕರ್ಷಿಸಲು ಯೋಜನೆ ರೂಪಿಸಲಾಗುತ್ತಿದ್ದು, ಮುಂದಿನ ವರ್ಷದಿಂದ ಇದನ್ನು ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









