ಮಂಗಳೂರು : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆಗಳನ್ನು ಖಂಡಿಸಿ ಹಾಗೂ ಜಾರಿಗೆ ತರಲಾದ 4 ಹೊಸ ಕಾರ್ಮಿಕ ಸಂಹಿತೆಗಳನ್ನು (Labour Code 2025) ರದ್ದುಗೊಳಿಸಬೇಕೆಂದು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟ ಇಂದು ಹಮ್ಮಿಕೊಂಡಿದ್ದ ಅಖಿಲ ಭಾರತ ಮಹಾ ಮುಷ್ಕರಕ್ಕೆ ಮಂಗಳೂರಿನಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಇಡೀ ಮಾರುಕಟ್ಟೆ ಪ್ರದೇಶ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.
ಯಾವಾಗಲೂ ಜನಜಂಗುಳಿ ಮತ್ತು ಚಟುವಟಿಕೆಗಳಿಂದ ಗಿಜಿಗುಟ್ಟುತ್ತಿದ್ದ ಬಂದರು ಪ್ರದೇಶದಲ್ಲಿ ಇಂದು ವ್ಯಾಪಾರ ವಹಿವಾಟುಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಕಾರ್ಮಿಕರಿಲ್ಲದೆ ಸರಕುಗಳ ಸಾಗಾಟ ಅಸಾಧ್ಯವಾದ ಕಾರಣ ವರ್ತಕರು ಕೂಡ ತಮ್ಮ ಅಂಗಡಿ-ಮುಂಗಟ್ಟು ಹಾಗೂ ಗೋದಾಮುಗಳನ್ನು ತೆರೆಯಲಿಲ್ಲ. ಮುಷ್ಕರದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರವೂ ವಿರಳವಾಗಿತ್ತು. ಬಂದರು ಶ್ರಮಿಕರ ಸಂಘವು ಮೊದಲೇ ಸಭೆಗಳನ್ನು ನಡೆಸಿ ಸಿದ್ಧತೆ ಮಾಡಿಕೊಂಡಿದ್ದರಿಂದ ಕಾರ್ಮಿಕರು ಒಗ್ಗಟ್ಟಾಗಿ ಮುಷ್ಕರವನ್ನು ಯಶಸ್ವಿಗೊಳಿಸಿದರು.
ಬಂದರು ಕಾರ್ಮಿಕರು ಈ ಮುಷ್ಕರದ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಬಂಡವಾಳಶಾಹಿ ಮಾಲೀಕರಿಗೆ ಟನ್ನುಗಟ್ಟಲೆ ಸರಕುಗಳನ್ನು ಖರೀದಿಸುವ ಆರ್ಥಿಕ ಶಕ್ತಿ ಇದ್ದರೂ, ಶ್ರಮಜೀವಿ ಕಾರ್ಮಿಕನಿಲ್ಲದೆ ಒಂದು ಮೂಟೆಯನ್ನೂ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂಬ ಸತ್ಯ ಈ ಮುಷ್ಕರದ ಮೂಲಕ ಸಾಬೀತಾಗಿದೆ. ಅದರಲ್ಲೂ ಬಿಜೆಪಿಯ ಭದ್ರಕೋಟೆಯೆಂದೇ ಬಿಂಬಿತವಾಗಿರುವ ಈ ಭಾಗದಲ್ಲಿ ಕಾರ್ಮಿಕರು ಮೋದಿ ಸರ್ಕಾರದ ನೀತಿಗಳ ವಿರುದ್ಧ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ. ಮಂಗಳೂರಿನ ಕ್ಲಾಕ್ ಟವರ್ ಬಳಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









