ಬೆಳ್ತಂಗಡಿ : ಬಳೆಂಜ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಜೇನು ಕೃಷಿ ಅಧ್ಯಯನದ ಹೆಸರಿನಲ್ಲಿ ತೆರೆದ ಪಿಕಪ್ ಮತ್ತು ಟಿಪ್ಪರ್ ವಾಹನಗಳಲ್ಲಿ ಕರೆದೊಯ್ದ ಘಟನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ, ಕೇವಲ ಸರಕು ಸಾಗಣೆಗೆ ಮೀಸಲಾದ ವಾಹನಗಳಲ್ಲಿ ಮಕ್ಕಳನ್ನು ಅಪಾಯಕಾರಿ ರೀತಿಯಲ್ಲಿ ಸಾಗಿಸಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಅವರ ನೇತೃತ್ವದಲ್ಲಿ ಫೆಬ್ರವರಿ 10ರಂದು ಈ ಅಧ್ಯಯನ ಪ್ರವಾಸ ನಡೆದಿದ್ದು, KA-21-A-8776 ಸಂಖ್ಯೆಯ ಪಿಕಪ್ ಹಾಗೂ KA-70-2596 ಸಂಖ್ಯೆಯ ಟಿಪ್ಪರ್ ಬಳಸಿ ಮಕ್ಕಳನ್ನು ಸ್ಥಳೀಯ ಅನಿಲ್ ಫಾರ್ಮ್ಗೆ ಕರೆದೊಯ್ಯಲಾಗಿತ್ತು.
ಮೋಟಾರು ವಾಹನ ಕಾಯ್ದೆಯಡಿ ಸರಕು ಸಾಗಣೆ ವಾಹನಗಳಲ್ಲಿ ಕಾರ್ಮಿಕರನ್ನೇ ಕರೆದೊಯ್ಯಲು ನಿರ್ಬಂಧವಿರುವಾಗ, ಶಾಲಾ ಮಕ್ಕಳನ್ನು ಇಷ್ಟು ಬೇಜವಾಬ್ದಾರಿಯಿಂದ ಕರೆದೊಯ್ದಿರುವುದು ಕಾನೂನು ಉಲ್ಲಂಘನೆಯಾಗಿದೆ. ಒಂದು ವೇಳೆ ಪ್ರಯಾಣದ ವೇಳೆ ಅಚಾತುರ್ಯ ಸಂಭವಿಸಿದ್ದರೆ ಯಾರು ಹೊಣೆ ಎಂದು ಪೋಷಕರು ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಶತಮಾನೋತ್ಸವ ಸಂಭ್ರಮ ಆಚರಿಸಿಕೊಂಡ ಶಾಲೆಯಲ್ಲೇ ಇಂತಹ ಘಟನೆ ನಡೆದಿರುವುದು ಬೇಸರದ ಸಂಗತಿ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಮಕ್ಕಳ ಸುರಕ್ಷತೆಯನ್ನು ನಿರ್ಲಕ್ಷಿಸಿದ ಮುಖ್ಯೋಪಾಧ್ಯಾಯ ಕಿರಣ್ ಹಾಗೂ ನಿಯಮ ಮೀರಿ ಮಕ್ಕಳನ್ನು ತುಂಬಿಸಿಕೊಂಡು ಹೋದ ವಾಹನ ಚಾಲಕರ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









