ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ರಾಮಕುಂಜ ಗ್ರಾಮದಲ್ಲಿ ಜನವರಿ 24 ರಂದು ನಡೆದ 17 ವರ್ಷದ ಬಾಲಕ ಮೋಕ್ಷ್ ಎಂಬಾತನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮಹತ್ವದ ವೈದ್ಯಕೀಯ ಮಾಹಿತಿ ಹೊರಬಿದ್ದಿದೆ. ಆರಂಭದಲ್ಲಿ ಮೋಕ್ಷ್ ತನ್ನ ತಂದೆಗೆ ಚಾಕುವಿನಿಂದ ಇರಿದು ನಂತರ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿತ್ತು. ಆದರೆ, ವೈದ್ಯಕೀಯ ಪರೀಕ್ಷೆಯ ವರದಿಯು ಈ ಘಟನೆಗೆ ಹೊಸ ಆಯಾಮ ನೀಡಿದ್ದು, ತಂದೆ ವಸಂತ ಅಮೀನ್ ಅವರಿಗೆ ಹೊಟ್ಟೆಯ ಭಾಗಕ್ಕೆ ತಗುಲಿರುವುದು ಚಾಕುವಿನ ಗಾಯವಲ್ಲ, ಬದಲಾಗಿ ಬಂದೂಕಿನ ಗುಂಡೇಟು ಎಂದು ದೃಢಪಡಿಸಿದೆ.
ಘಟನೆಯ ದಿನದಂದು ಕೌಟುಂಬಿಕ ಕಲಹ ತಾರಕಕ್ಕೇರಿತ್ತು ಎನ್ನಲಾಗಿದ್ದು, ಈ ವೇಳೆ ಮೋಕ್ಷ್ ತನ್ನ ತಂದೆಯ ಪರವಾನಗಿ ಹೊಂದಿದ ಎಸ್ಬಿಬಿಎಲ್ ಬಂದೂಕಿನಿಂದ ತಂದೆಯ ಮೇಲೆ ಗುಂಡು ಹಾರಿಸಿದ್ದಾನೆ. ಆನಂತರ ಅದೇ ಬಂದೂಕಿನಿಂದ ತನಗೆ ತಾನೇ ಶೂಟ್ ಮಾಡಿಕೊಂಡು ಮೃತಪಟ್ಟಿದ್ದಾನೆ ಎಂಬ ಅಂಶ ಈಗ ಮುನ್ನೆಲೆಗೆ ಬಂದಿದೆ. ತೀವ್ರವಾಗಿ ಗಾಯಗೊಂಡಿದ್ದ ವಸಂತ ಅಮೀನ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಈ ನಡುವೆ ಪ್ರಕರಣ ಮತ್ತಷ್ಟು ಸಂಕೀರ್ಣಗೊಂಡಿದ್ದು, ಮಗನನ್ನು ತಂದೆಯೇ ಕೊಲೆ ಮಾಡಿದ್ದಾರೆ ಎಂದು ತಾಯಿ ಜಯಶ್ರೀ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ವೈದ್ಯಕೀಯ ವರದಿ ಲಭ್ಯವಾಗಿದ್ದರೂ, ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ (FSL) ಅಂತಿಮ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಎಫ್ಎಸ್ಎಲ್ ವರದಿ ಬಂದ ನಂತರವಷ್ಟೇ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅಂತಿಮ ಸತ್ಯ ಹೊರಬರಲಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









