ಉಡುಪಿ : ನಗರಸಭೆಯಲ್ಲಿ ಆಸ್ತಿ ತೆರಿಗೆ ವಂಚನೆಗೆ ಸಂಬಂಧಿಸಿದ ಮತ್ತೊಂದು ಗಂಭೀರ ಪ್ರಕರಣ ಬೆಳಕಿಗೆ ಬಂದಿದ್ದು, ನಕಲಿ ಸೀಲು ಬಳಸಿ ಸಾರ್ವಜನಿಕರ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಲ್ಪೆ ರಸ್ತೆಯ ನಿವಾಸಿ ಬಿ. ಶಾಲಿನಿ (56) ಹಾಗೂ ಕುಕ್ಕಿಕಟ್ಟೆಯ ಸಚ್ಚಿದಾನಂದ ಲೇಔಟ್ ನಿವಾಸಿ ಗಣೇಶ್ (24) ಬಂಧಿತ ಆರೋಪಿಗಳು. ಸಾರ್ವಜನಿಕರು ಪಾವತಿಸಿದ ತೆರಿಗೆ ಹಣವನ್ನು ಸರ್ಕಾರಕ್ಕೆ ಜಮೆ ಮಾಡದೆ, ಬ್ಯಾಂಕ್ನ ನಕಲಿ ಮೊಹರು ಬಳಸಿ ರಸೀದಿ ನೀಡಿ ವಂಚಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.
ಕಲ್ಮಾಡಿಯ ನಿವಾಸಿ ಆನಂದ ಸುವರ್ಣ ಎಂಬುವವರು ತಮ್ಮ ಕಟ್ಟಡದ 12 ವರ್ಷಗಳ ಆಸ್ತಿ ತೆರಿಗೆಯಾದ 34,730 ರೂ. ಪಾವತಿಸಲು ಬಂದಿದ್ದಾಗ ಈ ವಂಚನೆ ನಡೆದಿದೆ. ಕಚೇರಿಯ ಹೊರಗೆ ಕಾರ್ಯನಿರ್ವಹಿಸುತ್ತಿದ್ದ ಶಾಲಿನಿ ಎಂಬವರು ಹಣ ಪಡೆದು, ಮುಂದಿನ ದಿನಾಂಕದ ರಸೀದಿಯನ್ನು ನೀಡಿದ್ದರು. ಆದರೆ ನಗರಸಭೆಯ ಆನ್ಲೈನ್ ವ್ಯವಸ್ಥೆಯಲ್ಲಿ ತೆರಿಗೆ ಬಾಕಿ ಇರುವುದು ಕಂಡುಬಂದಾಗ ಸಂಶಯಗೊಂಡ ಅಧಿಕಾರಿಗಳು ತನಿಖೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಆರೋಪಿಗಳು ಯೂನಿಯನ್ ಬ್ಯಾಂಕ್ನ ನಕಲಿ ಮೊಹರು ಬಳಸಿ ಸಾರ್ವಜನಿಕರನ್ನು ನಂಬಿಸಿ ಹಣ ಲಪಟಾಯಿಸುತ್ತಿರುವುದು ದೂರಿನಲ್ಲಿ ದೃಢಪಟ್ಟಿದೆ.
ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಪಿ. ನೇತೃತ್ವದ ತಂಡವು ಫೆಬ್ರವರಿ 20ರಂದು ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದೆ. ಪಿಎಸ್ಐ ಗೋಪಾಲಕೃಷ್ಣ ಜೋಗಿ ಸೇರಿದಂತೆ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಸದ್ಯ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ವಂಚನೆಯ ಜಾಲದಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತೀವ್ರ ತನಿಖೆ ಮುಂದುವರಿದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









