ಮಂಗಳೂರು : ಮಹಾಕಾಳಿಪಡ್ಡು ರೈಲ್ವೇ ಅಂಡರ್ಪಾಸ್ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದ ಬೆನ್ನಲ್ಲೇ, ಪಾಂಡೇಶ್ವರ ರೈಲ್ವೇ ಲೆವೆಲ್ ಕ್ರಾಸಿಂಗ್ ಬಳಿ ವಾಹನ ದಟ್ಟಣೆಯ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ನಗರದ ಪ್ರಮುಖ ಸಂಪರ್ಕ ರಸ್ತೆಯಾದ ಪಂಪ್ವೆಲ್-ಕಂಕನಾಡಿ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಬಂದ್ ಆಗಿರುವುದರಿಂದ, ತೊಕ್ಕೊಟ್ಟು ಕಡೆಯಿಂದ ಬರುವ ಹೆಚ್ಚಿನ ವಾಹನಗಳು ಜಪ್ಪು ಮಾರ್ಗವಾಗಿ ಮಹಾಕಾಳಿಪಡ್ಡು ಮೂಲಕ ನಗರ ಪ್ರವೇಶಿಸುತ್ತಿವೆ. ಈ ಬದಲಾವಣೆಯು ಪಾಂಡೇಶ್ವರ ರೈಲ್ವೇ ಗೇಟ್ ಬಳಿ ಹಿಂದೆಂದೂ ಇಲ್ಲದಷ್ಟು ವಾಹನಗಳ ಸಾಲು ನಿರ್ಮಾಣವಾಗಲು ಕಾರಣವಾಗಿದೆ.
ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಬಂದರ್ ಗೂಡ್ಸ್ ಶೆಡ್ಗೆ ತೆರಳುವ ಖಾಲಿ ರೈಲುಗಳು ಮತ್ತು ಎಂಜಿನ್ಗಳ ಸಂಚಾರಕ್ಕಾಗಿ ದಿನಕ್ಕೆ ಕನಿಷ್ಠ 16 ಬಾರಿ ಇಲ್ಲಿ ಗೇಟ್ ಹಾಕಲಾಗುತ್ತದೆ. ಹಳೆಯ ಮಾದರಿಯ ಈ ಗೇಟ್ ತಾಂತ್ರಿಕ ಸಮಸ್ಯೆಗಳಿಂದಾಗಿ ಸರಿಯಾಗಿ ಕಾರ್ಯನಿರ್ವಹಿಸದೆ ವಿಳಂಬವಾಗುತ್ತಿರುವುದು ಸವಾರರ ತಾಳ್ಮೆ ಪರೀಕ್ಷಿಸುತ್ತಿದೆ. ಒಮ್ಮೆ ಗೇಟ್ ಹಾಕಿದರೆ ವಾಹನಗಳ ಸಾಲು ಒಂದು ಬದಿಯಲ್ಲಿ ಫೋರಂ ಮಾಲ್ ವರೆಗೆ ಹಾಗೂ ಮತ್ತೊಂದು ಬದಿಯಲ್ಲಿ ಎಮ್ಮೆಕೆರೆ ಒಳರಸ್ತೆಯವರೆಗೆ ಚಾಚುತ್ತಿದ್ದು, ಜನಸಾಮಾನ್ಯರು ಕನಿಷ್ಠ 20 ನಿಮಿಷಗಳ ಕಾಲ ರಸ್ತೆಯಲ್ಲೇ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಸಂಚಾರ ದಟ್ಟಣೆಯು ಕೇವಲ ಉದ್ಯೋಗಿಗಳು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ತುರ್ತು ಸೇವೆಗಳಾದ ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳದ ವಾಹನಗಳಿಗೂ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾದಾಗ ತುರ್ತು ವಾಹನಗಳು ಸಿಲುಕಿಕೊಳ್ಳುವುದು ಈಗ ಸಾಮಾನ್ಯ ಎಂಬಂತಾಗಿದೆ. ಈ ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಜನಪ್ರತಿನಿಧಿಗಳ ಸಭೆಗಳು ಫಲಪ್ರದವಾಗಿಲ್ಲ. ರೈಲ್ವೇ ಇಲಾಖೆಗೆ ಈ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದ್ದರೂ, ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









