ತಿರುವಾಂಕೂರು : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ ಹಳೆಯ ಸಂಪ್ರದಾಯಗಳನ್ನು ಕಾಪಾಡಿಕೊಳ್ಳಲು ತಿರುವಾಂಕೂರು ದೇವಸ್ವಂ ಮಂಡಳಿ (TDB) ನಿರ್ಧರಿಸಿದೆ. 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನೀಡದ ಪದ್ಧತಿಯನ್ನು ಮುಂದುವರಿಸಲಾಗುವುದು ಎಂದು ಮಂಡಳಿಯ ಅಧ್ಯಕ್ಷ ಕೆ. ಜಯಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸುವ ಮೂಲಕ ತನ್ನ ಅಧಿಕೃತ ನಿಲುವನ್ನು ಮಂಡಳಿ ಪ್ರಕಟಿಸಲಿದೆ.
2018ರಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ಪ್ರವೇಶ ಕಲ್ಪಿಸಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಪುನರ್ಪರಿಶೀಲನಾ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 14ರೊಳಗೆ ತನ್ನ ನಿಲುವು ತಿಳಿಸುವಂತೆ ನ್ಯಾಯಾಲಯವು ಮಂಡಳಿಗೆ ಸೂಚಿಸಿತ್ತು. ಈ ಆದೇಶಕ್ಕೆ ಪ್ರತಿಕ್ರಿಯಿಸಿರುವ ಮಂಡಳಿಯು, ಗರ್ಭಧಾರಣೆಯ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವ 2018ರ ತೀರ್ಪನ್ನು ವಿರೋಧಿಸುವುದಾಗಿ ತಿಳಿಸಿದೆ.
ದೇವಸ್ಥಾನದ ಆಚರಣೆಗಳು, ನಂಬಿಕೆಗಳು ಮತ್ತು ಪವಿತ್ರತೆಯನ್ನು ರಕ್ಷಿಸುವುದು ಮಂಡಳಿಯ ಮೊದಲ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಹಳೆಯ ಸಂಪ್ರದಾಯವನ್ನೇ ಮುಂದುವರಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ರಾಜ್ಯ ಸರ್ಕಾರವೂ ಬೆಂಬಲ ನೀಡಬೇಕು ಎಂದು ಮಂಡಳಿ ಆಗ್ರಹಿಸಿದೆ. ನ್ಯಾಯಾಲಯದ ಮುಂದೆ ಮಂಡಳಿಯು ತನ್ನ ಈ ದೃಢ ನಿಲುವನ್ನು ಪ್ರತಿಪಾದಿಸಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









