ಮಂಗಳೂರು : ಕೃಷ್ಣವಾಣಿ ಪಿಕ್ಚರ್ಸ್ ಬ್ಯಾನರ್ನಡಿ ಜಗದೀಶ್ ಅಮೀನ್ ನಿರ್ಮಾಣದಲ್ಲಿ ಮೂಡಿಬಂದಿರುವ, ಕಳೆದ ವರ್ಷ ಕರಾವಳಿಯಾದ್ಯಂತ ಸದ್ದು ಮಾಡಿದ್ದ ತುಳು ಚಲನಚಿತ್ರ ‘ಧರ್ಮ ಚಾವಡಿ’ ಇದೀಗ ಡಿಜಿಟಲ್ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದೆ. ಮಾರ್ಚ್ 6ರಂದು ಈ ಚಿತ್ರವು ‘ಟಾಕೀಸ್ ಆ್ಯಪ್’ (Talkies App) OTT ವೇದಿಕೆಯ ಮೂಲಕ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡವು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. ಚಿತ್ರಮಂದಿರಗಳಲ್ಲಿ ಭಾರಿ ಜನಮನ್ನಣೆ ಗಳಿಸಿದ್ದ ಈ ಸಿನಿಮಾ, ಇದೀಗ ಅನಿವಾಸಿ ತುಳುವರಿಗೂ ಮತ್ತು ಮನೆಯಲ್ಲೇ ಕುಳಿತು ಸಿನಿಮಾ ನೋಡುವವರಿಗೂ ಲಭ್ಯವಾಗಲಿದೆ.
ಈ ಹಿಂದೆ ‘ಧರ್ಮ ದೈವ’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಅವರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದು, ಧರ್ಮ ಮತ್ತು ದೈವದ ಶಕ್ತಿಯನ್ನು ಕಥೆಯಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ರಕ್ಷನ್ ಮಾಡೂರು, ಚಿತ್ರದ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಹಿರಿಯ ನಟ ರಮೇಶ್ ರೈ ಕುಕ್ಕುವಳ್ಳಿ ಅವರು ಮಾತನಾಡುತ್ತಾ, “ಧರ್ಮ ಚಾವಡಿ” ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿ ಕರ್ನಾಟಕದಾದ್ಯಂತ ಬಿಡುಗಡೆ ಮಾಡುವ ಯೋಜನೆ ಇದೆ ಎಂಬ ಆಶಾದಾಯಕ ವಿಷಯವನ್ನು ಹಂಚಿಕೊಂಡರು. ನಟಿ ನೇಹಾ ಕೋಟ್ಯಾನ್ ಅವರು ಪ್ರೇಕ್ಷಕರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿ, OTT ಮೂಲಕವೂ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದಲ್ಲಿ ರವಿ ಸ್ನೇಹಿತ್ ನಾಯಕನಾಗಿ ಮತ್ತು ಧನ್ಯ ಪೂಜಾರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸುರೇಶ್ ರೈ, ಚೇತನ್ ರೈ ಮಾಣಿ, ರೂಪ ಶೆಟ್ಟಿ, ಸುಂದರ್ ರೈ ಮಂದಾರ, ದೀಪಕ್ ರೈ ಪಾಣಾಜೆ ಸೇರಿದಂತೆ ತುಳು ಚಿತ್ರರಂಗದ ಹೆಸರಾಂತ ಕಲಾವಿದರ ದಂಡೇ ಚಿತ್ರದಲ್ಲಿದೆ. ಅರುಣ್ ರೈ ಪುತ್ತೂರು ಅವರ ಛಾಯಾಗ್ರಹಣ, ಪ್ರಸಾದ್ ಕೆ. ಶೆಟ್ಟಿ ಅವರ ಸಂಗೀತ ಮತ್ತು ರಝಾಕ್ ಪುತ್ತೂರು ಅವರ ಸಂಭಾಷಣೆ ಚಿತ್ರದ ಮೆರುಗನ್ನು ಹೆಚ್ಚಿಸಿದೆ. ಕರಾವಳಿಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಸಾರುವ ಈ ಚಿತ್ರವು ಇದೀಗ ಡಿಜಿಟಲ್ ಪರದೆಯ ಮೇಲೆ ಕಮಾಲ್ ಮಾಡಲು ಸಜ್ಜಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









