ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೀಡಾಡಿ ಜಾನುವಾರುಗಳ ಹಾವಳಿ ಮಿತಿಮೀರಿದ್ದು, ಭಾನುವಾರ (ಮಾರ್ಚ್ 08) ಸಂಜೆ ರಥಬೀದಿಯಲ್ಲಿ ನಡೆದ ಹೋರಿಗಳ ಜಗಳದಿಂದಾಗಿ ಮಹಿಳೆ ಮತ್ತು ಮಗು ಗಾಯಗೊಂಡಿದ್ದಾರೆ. ರಥಬೀದಿಯಲ್ಲಿ ಎರಡು ಹೋರಿಗಳು ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾಗ, ಹತ್ತಿರದಲ್ಲೇ ಸಾಗುತ್ತಿದ್ದ ಭಕ್ತರು ಭಯಭೀತರಾಗಿ ಓಡಿದ್ದಾರೆ. ಈ ಗೊಂದಲದ ನಡುವೆ ಮಹಿಳೆ ಹಾಗೂ ಮಗು ಎಡವಿ ಬಿದ್ದು ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಅವರನ್ನು ಉಪಚರಿಸಿದ್ದಾರೆ. ಈ ಆತಂಕಕಾರಿ ದೃಶ್ಯದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ರಥಬೀದಿಯಲ್ಲಿ ಬೀಡಾಡಿ ದನಗಳು ಹಾಗೂ ನಾಯಿಗಳ ಕಾಟದಿಂದಾಗಿ ಮುಕ್ತವಾಗಿ ಓಡಾಡುವುದು ಕಷ್ಟಕರವಾಗಿದೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದರೂ, ಸಂಬಂಧಪಟ್ಟ ಆಡಳಿತ ಮಂಡಳಿ ಅಥವಾ ಸ್ಥಳೀಯ ಸಂಸ್ಥೆಗಳು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಈ ಬೀಡಾಡಿ ಜಾನುವಾರುಗಳನ್ನು ನಿಯಂತ್ರಿಸಲು ತಕ್ಷಣವೇ ಸೂಕ್ತ ವ್ಯವಸ್ಥೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









