ಮಂಗಳೂರು : ಹಳೆಯಂಗಡಿ ಸಸಿಹಿತ್ಸುವಿನ ಶ್ರೀ ಭಗವತೀ ದೇವಸ್ಥಾನದಲ್ಲಿ ಭಾನುವಾರ ಸಪರಿವಾರ ಶ್ರೀ ಭಗವತೀ ಅಮ್ಮನವರಿಗೆ ಬ್ರಹ್ಮಕಲಶೋತ್ಸವವು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ವಿದ್ವಾನ್ ವೇದಮೂರ್ತಿ ಕೃಷ್ಣಮೂರ್ತಿ ಭಟ್ ಹೊಯ್ದೆಗುಡ್ಡೆ ಮತ್ತು ಶ್ರೀಪತಿ ಭಟ್ ಹೊಯ್ದೆಗುಡ್ಡೆ ಅವರ ನೇತೃತ್ವ ಹಾಗೂ ವೇದಮೂರ್ತಿ ವೆಂಕಟೇಶ ತಂತ್ರಿ ಎಡಪದವು ಅವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಬೆಳಿಗ್ಗೆ ಚಂಡಿಕಾ ಯಾಗ ಸಂಪನ್ನಗೊಂಡ ಬಳಿಕ, 11:15ರ ಶುಭ ವೃಷಭ ಲಗ್ನ ಮುಹೂರ್ತದಲ್ಲಿ ದೇವಿಗೆ ಬ್ರಹ್ಮಕಲಶಾಭಿಷೇಕವನ್ನು ನೆರವೇರಿಸಲಾಯಿತು. ಮಧ್ಯಾಹ್ನ ಮಹಾಪೂಜೆ, ಪಲ್ಲ ಪೂಜೆ ಹಾಗೂ ಭಕ್ತಾದಿಗಳಿಗೆ ಬೃಹತ್ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಈ ವೈಭವದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಂಸದ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ್ ಬೆಲ್ಬಡ, ಸಮಿತಿಯ ಗೌರವಾಧ್ಯಕ್ಷ ರೋಹಿದಾಸ್ ಬಂಗೇರ ಮುಂಬೈ, ಕಾರ್ಯಾಧ್ಯಕ್ಷ ವಾಮನ್ ಇಡ್ಯಾ ಹಾಗೂ ಮುಂಬೈ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. ಉದ್ಯಮಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಧನಂಜಯ ಶೆಟ್ಟಿ ಸಸಿಹಿತ್ತು ಸೇರಿದಂತೆ ಹತ್ತಾರು ಗಣ್ಯರು ಮತ್ತು ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ದೇವಿಯ ದರ್ಶನ ಪಡೆದರು.
ದೂರದ ಊರುಗಳಿಂದ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಾವಂಜೆ, ಹಳೆಯಂಗಡಿ ಹಾಗೂ ಪಡುಪಣಂಬೂರು ಭಾಗಗಳಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದರೆ, ಕಿನ್ನಿಗೋಳಿ, ಮೂಲ್ಕಿ ಮತ್ತು ಸುರತ್ಕಲ್ ಕಡೆಗಳಿಂದ ಸರ್ಕಾರಿ ಬಸ್ಗಳ ಸೌಲಭ್ಯ ಒದಗಿಸಲಾಗಿತ್ತು. ವಿಶೇಷವೆಂದರೆ ಸ್ಥಳೀಯ ಆಟೋ ರಿಕ್ಷಾ ಚಾಲಕರು ಕೂಡ ಭಕ್ತರನ್ನು ಉಚಿತವಾಗಿ ದೇವಸ್ಥಾನಕ್ಕೆ ತಲುಪಿಸುವ ಮೂಲಕ ಗಮನಾರ್ಹ ಸೇವೆ ಸಲ್ಲಿಸಿದರು.
ಮಾರ್ಚ್ 8ರಂದು ಸಂಜೆ ಸಸಿಹಿತ್ಲು ಸಮುದ್ರ ತೀರದಲ್ಲಿ ಕಾಶಿಯ ಮಾದರಿಯಲ್ಲೇ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಭವ್ಯ ‘ಸಮುದ್ರ ಆರತಿ’ ಕಡಲ ಮಾತೆಗೆ ದೀಪಾರತಿ ನಡೆಯಿತು.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









