ಮಂಗಳೂರು : ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಉದ್ವಿಗ್ನತೆಯಿಂದಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳಬೇಕಿದ್ದ ವಿಮಾನಗಳ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಮಾರ್ಚ್ 9ರ ಸೋಮವಾರವೂ ಹಲವಾರು ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ಕೊನೆಕ್ಷಣದಲ್ಲಿ ರದ್ದುಗೊಳಿಸಲಾಗಿದ್ದು, ಇದರಿಂದ ದುಬೈ, ಜೆದ್ದಾ ಮತ್ತು ದಮಾಮ್ಗೆ ಪ್ರಯಾಣಿಸಬೇಕಿದ್ದ ನೂರಾರು ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಇಂಡಿಗೋ ಸಂಸ್ಥೆಯ ಹಲವು ವಿಮಾನಗಳು ಕಾರ್ಯಾಚರಣೆ ಸ್ಥಗಿತಗೊಳಿಸಿರುವುದು ವಿದೇಶಕ್ಕೆ ತೆರಳುವವರಿಗೆ ದೊಡ್ಡ ಹೊಡೆತ ನೀಡಿದೆ.
ಮಂಗಳೂರಿನಿಂದ ಜೆದ್ದಾಕ್ಕೆ ತೆರಳಬೇಕಿದ್ದ ಐಎಕ್ಸ್ 845 ಮತ್ತು ಮರಳಿ ಬರಬೇಕಿದ್ದ ಐಎಕ್ಸ್ 846 ವಿಮಾನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದೇ ರೀತಿ ದುಬೈ ಮತ್ತು ದಮಾಮ್ ಮಾರ್ಗಗಳ ಹಲವು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರವು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇಂಡಿಗೋ ಸಂಸ್ಥೆಯ ದುಬೈ-ಮಂಗಳೂರು ವಿಮಾನಗಳ ಜೊತೆಗೆ ಬೆಂಗಳೂರು-ಮಂಗಳೂರು ನಡುವಿನ ಆಂತರಿಕ ವಿಮಾನ ಸೇವೆಯಲ್ಲೂ ವ್ಯತ್ಯಯ ಕಂಡುಬಂದಿದೆ. ವಿದೇಶಿ ಉದ್ಯೋಗಕ್ಕೆ ಮರಳುವವರು ಮತ್ತು ತುರ್ತು ಕಾರ್ಯಗಳಿಗಾಗಿ ಪ್ರಯಾಣಿಸಬೇಕಿದ್ದವರು ನಿಲ್ದಾಣದಲ್ಲೇ ಕಾಯುವಂತಾಗಿದೆ.
ಇತ್ತ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಭಾನುವಾರ ಮಧ್ಯಪ್ರಾಚ್ಯ ದೇಶಗಳಿಂದ ಬರಬೇಕಿದ್ದ 9 ವಿಮಾನಗಳು ಮತ್ತು ಅಲ್ಲಿಗೆ ತೆರಳಬೇಕಿದ್ದ 10 ವಿಮಾನಗಳು ಸೇರಿದಂತೆ ಒಟ್ಟು 19 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಅತಂತ್ರರಾಗಿದ್ದು, ವಿಮಾನಯಾನ ಸಂಸ್ಥೆಗಳು ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿವೆ ಎಂಬ ದೂರುಗಳು ಕೇಳಿಬರುತ್ತಿವೆ. ಯುದ್ಧದ ಭೀತಿಯು ಅಂತರಾಷ್ಟ್ರೀಯ ವಾಯುಯಾನ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









