ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಬಳಕೆಯ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಮತ್ತು ಮುಂದೆಯೂ ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ 25 ದಿನಕ್ಕೊಂದು ಸಿಲಿಂಡರ್ ಪೂರೈಕೆಯ ನಿಯಮದಂತೆಯೇ ವಿತರಣೆ ನಡೆಯುತ್ತಿದೆ. ಹೀಗಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಿ ಏಕಕಾಲಕ್ಕೆ ಎರಡೆರಡು ಸಿಲಿಂಡರ್ ಬುಕ್ ಮಾಡುವ ಅಗತ್ಯವಿಲ್ಲ, ಅದಕ್ಕೆ ನಿಯಮಾವಳಿಗಳಲ್ಲಿ ಅವಕಾಶವೂ ಇಲ್ಲ ಎಂದು ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕರ ಗೊಂದಲಗಳಿಗೆ ಅವರು ಈ ಮೂಲಕ ತೆರೆ ಎಳೆದಿದ್ದಾರೆ.
ಅಡುಗೆ ಅನಿಲದ ದಾಸ್ತಾನು ಮತ್ತು ವಿತರಣೆಯನ್ನು ಸುಗಮಗೊಳಿಸಲು ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅನಿಲ ಏಜೆನ್ಸಿಗಳು ಅನಗತ್ಯವಾಗಿ ದಾಸ್ತಾನು ಮಾಡಿಕೊಳ್ಳದಂತೆ ಪೊಲೀಸ್ ಇಲಾಖೆಯ ಮೂಲಕ ನಿಗಾ ಇರಿಸಲಾಗಿದ್ದು, ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಕಂಪನಿಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಎಂಆರ್ಪಿಎಲ್ನಿಂದಲೂ ಎಲ್ಪಿಜಿ ಉತ್ಪಾದನೆ ಮತ್ತು ಪೂರೈಕೆ ಎಂದಿನಂತೆ ನಡೆಯುತ್ತಿದೆ. ಆದರೆ, ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಪೂರೈಕೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಹೊಸ ಮಾನದಂಡಗಳು ಬರುವವರೆಗೆ ತಾತ್ಕಾಲಿಕ ಸ್ಥಗಿತ ಉಂಟಾಗಿದ್ದು, ಇದನ್ನು ಸರಿಪಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ವಿವರಿಸಿದ್ದಾರೆ.
ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಮಿಲಿಟರಿ ಕ್ಯಾಂಟೀನ್ಗಳು ಮತ್ತು ಜೈಲುಗಳಂತಹ ತುರ್ತು ಸೇವಾ ಸಂಸ್ಥೆಗಳಿಗೆ ಅನಿಲ ಪೂರೈಕೆಯಲ್ಲಿ ಯಾವುದೇ ಅಡೆತಡೆ ಉಂಟಾಗದಂತೆ ವಿಶೇಷ ಗಮನ ಹರಿಸಲಾಗಿದೆ. ದೇವಸ್ಥಾನಗಳ ಅನ್ನದಾಸೋಹ, ಚರ್ಚ್ ಮತ್ತು ಮಸೀದಿಗಳಿಗೂ ಪೂರೈಕೆ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗಿದೆ. ರೈಲ್ವೇ ನಿಲ್ದಾಣಗಳಿಂದ ಬಂದಿರುವ ಬೇಡಿಕೆಗಳನ್ನೂ ಪರಿಗಣಿಸಲಾಗಿದ್ದು, ಜಿಲ್ಲೆಯಾದ್ಯಂತ ಗೃಹ ಬಳಕೆಯ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆ ಎದುರಾಗದಂತೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.
ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಕುಂದು ಕೊರತೆ : ಸಹಾಯವಾಣಿ
ಮಂಗಳೂರು : ಜಿಲ್ಲೆಯಲ್ಲಿ ಗೃಹ ಬಳಕೆ ಅನಿಲ ಸಿಲಿಂಡರ್ಗಳ ದಾಸ್ತಾನು ಲಭ್ಯವಿದ್ದು, ಜಿಲ್ಲೆಯ ಎಲ್ಲಾ ಗೃಹ ಬಳಕೆ ಅನಿಲ ಗ್ರಾಹಕರು ಯಾರು ಸಹ ಗಾಬರಿ/ ಆತಂಕಪಡಬಾರದೆಂದು ಹಾಗೂ ಹೆಚ್ಚುವರಿ ದಾಸ್ತಾನು ಮಾಡಿಕೊಳ್ಳಬಾರದು.
ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಸಿಲಿಂಡರ್ಗಳ ಕೊರತೆ ಇಲ್ಲದಿರುವುದರಿಂದ ಸಾರ್ವಜನಿಕರು ಭಯ ಬೀಳುವ ಅಗತ್ಯವಿಲ್ಲ ಮತ್ತು ಸಾಮಾಜಿಕ ಜಾಲತಾಣದಲ್ಲಿ ಭಿತ್ತರವಾಗುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಗೃಹ ಬಳಕೆ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಯಾವುದೇ ಕುಂದು ಕೊರತೆ ಇದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗೃಹ ಬಳಕೆ ಅನಿಲ ಗ್ರಾಹಕರು ಸಹಾಯವಾಣಿ ಸಂಖ್ಯೆ 0824-2423622 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









