ಮಂಗಳೂರು : ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ಭೀಕರ ರೀತಿಯಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಬಡಗ ಎಡಪದವು ಗ್ರಾಮದ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಸಮೀಪ ಮುಂಜಾನೆ ಸುಮಾರು 4:30ಕ್ಕೆ ಈ ಕಾರ್ಯಾಚರಣೆ ನಡೆದಿದೆ. ಬಜರಂಗದಳ ಸಂಘಟನೆಯ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ನಡೆಸಿದಾಗ, ಫಾರ್ಚುನರ್ ಕಾರೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ.
ಪೊಲೀಸರು ಕಾರನ್ನು ತಡೆದು ನಿಲ್ಲಿಸುತ್ತಿದ್ದಂತೆಯೇ ಒಳಗಿದ್ದ ಆರೋಪಿಗಳು ಕತ್ತಲ ಲಾಭ ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ಕಾರನ್ನು ಪರಿಶೀಲಿಸಿದಾಗ, ಅತ್ಯಂತ ಹಿಂಸಾತ್ಮಕವಾಗಿ ಐದು ದನಗಳನ್ನು ಕಟ್ಟಿ ಹಾಕಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಕಾರಿನೊಳಗೆ ದಾಳಿ ನಡೆಸಲು ಬಳಸುವ ಮಾರಕಾಯುಧಗಳು ಸಹ ಪತ್ತೆಯಾಗಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ತಕ್ಷಣವೇ ದನಗಳನ್ನು ರಕ್ಷಿಸಿದ ಪೊಲೀಸರು, ಕಾರು ಮತ್ತು ಆಯುಧಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ದನಗಳ್ಳತನ ಮತ್ತು ಸಾಗಾಟದ ಹಿಂದೆ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗಿದ್ದು, ವಿವಿಧ ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ. ದೇವಸ್ಥಾನದ ಸಮೀಪವೇ ಇಂತಹ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









