ವಿಟ್ಲ : ವಿಟ್ಲ ಪೊಲೀಸ್ ವ್ಯಾಪ್ತಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಮತ್ತು ಸಂಗ್ರಹಣೆಯ ದೊಡ್ಡ ಜಾಲವೊಂದನ್ನು ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಬಜರಂಗದಳದ ಕಲ್ಲಡ್ಕ ಪ್ರಖಂಡದ ಕಾರ್ಯಕರ್ತರು ನೀಡಿದ ನಿಖರವಾದ ಮುನ್ಸೂಚನೆಯನ್ನು ಆಧರಿಸಿ ಸಕಾಲದಲ್ಲಿ ಕಾರ್ಯಪ್ರವೃತ್ತರಾದ ವಿಟ್ಲ ಸಬ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳ ತಂಡವು ಈ ಭೇಟೆಯನ್ನಾಡಿದೆ. ಖಚಿತ ಮಾಹಿತಿ ಬೆನ್ನತ್ತಿ ಕಾಯುತ್ತಿದ್ದ ಭದ್ರತಾ ಸಿಬ್ಬಂದಿಗಳು ಅಕ್ರಮ ದನಗಳ ಸಾಗಾಟದ ಜಾಲವನ್ನು ಹೆಡೆಮುರಿ ಕಟ್ಟಲು ದಾಳಿ ಸಂಘಟಿಸಿದ್ದಾರೆ.
ಕಾರ್ಯಾಚರಣೆಯ ವೇಳೆ ಅಕ್ರಮ ದನಗಳನ್ನು ಸಾಗಿಸುತ್ತಿದ್ದ ಸ್ವಿಫ್ಟ್ ಕಾರೊಂದನ್ನು ತಡೆಯಲು ಪೊಲೀಸರು ಮುಂದಾದಾಗ ಗಂಭೀರ ಸ್ವರೂಪದ ಘಟನೆಯೊಂದು ಸಂಭವಿಸಿದೆ. ಕಾನೂನು ಜಾರಿ ಅಧಿಕಾರಿಗಳು ವಾಹನ ನಿಲ್ಲಿಸುವಂತೆ ಸೂಚನೆ ನೀಡಿದರೂ, ಅದಕ್ಕೆ ಕ್ಯಾರೆ ಎನ್ನದ ದನಗಳ ಕಳ್ಳಸಾಗಣೆದಾರರು ತಮ್ಮ ಕಾರನ್ನು ನೇರವಾಗಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಚಲಾಯಿಸಿ ಜೀವಹಾನಿ ಮಾಡಲು ಯತ್ನಿಸಿದ್ದಾರೆ. ಪೊಲೀಸರನ್ನು ವಾಹನದಿಂದ ಗುದ್ದಿ ಸಾಯಿಸುವ ಕ್ರೂರ ಉದ್ದೇಶದಿಂದ ಆರೋಪಿಗಳು ವರ್ತಿಸಿದ್ದು, ಸಿಬ್ಬಂದಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಷ್ಟಕ್ಕೇ ನಿಲ್ಲದ ಪೊಲೀಸರ ತನಿಖಾ ತಂಡವು ತದನಂತರ ಜಾನುವಾರುಗಳನ್ನು ಅಕ್ರಮವಾಗಿ ಅಡಗಿಸಿಟ್ಟಿದ್ದ ಮನೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿದೆ. ಈ ವೇಳೆ ಹಿಂಸಾತ್ಮಕವಾಗಿ ಹಾಗೂ ಕಟುಕತನದಿಂದ ಮನೆಯ ಆವರಣದಲ್ಲಿ ಕೂಡಿಹಾಕಲಾಗಿದ್ದ 30ಕ್ಕೂ ಹೆಚ್ಚು ದನಗಳು ಮತ್ತು ಜಾನುವಾರುಗಳನ್ನು ಪತ್ತೆಹಚ್ಚಿ, ಅವುಗಳನ್ನು ತಕ್ಷಣವೇ ರಕ್ಷಿಸಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಹಾಗೂ ಅಕ್ರಮ ಗೋದೂಷಣೆಯಲ್ಲಿ ತೊಡಗಿದ್ದ ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









