ಮಂಗಳೂರು: ಮೂಡುಶೆಡ್ಡೆಯಲ್ಲಿ ಪ್ರೇಮ ವೈಫಲ್ಯ ಮತ್ತು ಮನಸ್ತಾಪದಿಂದ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೂಡುಶೆಡ್ಡೆಯ ಎದುರುಪದವು ನಿವಾಸಿ ಮೊಹಮ್ಮದ್ ಆಶಿಕ್ ಮೃತಪಟ್ಟ ದುರ್ದೈವಿ. ಕಾಲೇಜು ದಿನಗಳಲ್ಲಿ ಉಳ್ಳಾಲ ಮೂಲದ ಸಹಪಾಠಿಯೊಬ್ಬಳನ್ನು ಪ್ರೀತಿಸುತ್ತಿದ್ದ ಆಶಿಕ್, ಪದವಿ ಮುಗಿಸಿ ಅಕೌಂಟೆಂಟ್ ಆಗಿ ವೃತ್ತಿ ಮಾಡುತ್ತಿದ್ದನು. ಆದರೆ ಇತ್ತೀಚಿನ ದಿನಗಳಲ್ಲಿ ಯುವತಿ ಆತನಿಂದ ದೂರವಾಗಲು ಯತ್ನಿಸುತ್ತಿದ್ದ ಕಾರಣ ಇಬ್ಬರ ನಡುವೆ ಪದೇ ಪದೇ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ.
ಈ ಸಾವಿಗೆ ಸಂಬಂಧಿಸಿದಂತೆ ಆಶಿಕ್ ಕುಟುಂಬಸ್ಥರು ಯುವತಿಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಆಶಿಕ್ ಬಳಸುತ್ತಿದ್ದ ಮೊಬೈಲ್ ಫೋನ್ ದಾಖಲೆಗಳು, ಚಾಟ್ ಸಂದೇಶಗಳು ಹಾಗೂ ವಿಡಿಯೋ ಕರೆಗಳನ್ನು ಗಮನಿಸಿದಾಗ, ಯುವತಿಯು ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಕಂಡುಬಂದಿದೆ. ಅಲ್ಲದೆ, ಸಾಯುವಂತೆ ಆತನಿಗೆ ಪ್ರಚೋದನೆ ನೀಡಿದ್ದಾಳೆ ಎಂದು ಕುಟುಂಬದವರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರೀತಿಯ ಹೆಸರಿನಲ್ಲಿ ಮಾನಸಿಕ ಕಿರುಕುಳ ನೀಡಿ ಆತನ ಸಾವಿಗೆ ಆಕೆಯೇ ನೇರ ಕಾರಣವಾಗಿದ್ದಾಳೆ ಎಂಬ ದೂರು ಕೇಳಿಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸಾಕ್ಷ್ಯ ಸಂಗ್ರಹದ ಭಾಗವಾಗಿ ಮೃತನ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು, ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ (FSL) ಕಳುಹಿಸಿದ್ದಾರೆ. ಮೊಬೈಲ್ನಲ್ಲಿರುವ ಸಂಭಾಷಣೆ ಮತ್ತು ತಾಂತ್ರಿಕ ದಾಖಲೆಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









