ಮಂಗಳೂರು: ಕಲಾಭಿ(ರಿ.)ನ 5ನೇ ಸಂವತ್ಸರದ ಸಂಭ್ರಮದ ಕಲಾ ಹಬ್ಬಗಳ ಸರಣಿಯ ಉದ್ಘಾಟನಾ ಸಮಾರಂಭವು ಏಪ್ರಿಲ್ 11ರಂದು ಕಲಾಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಲಾ ಹಬ್ಬಗಳ ಸರಣಿ ಮತ್ತು ಇದರ ಮೊದಲ ಕಾರ್ಯಕ್ರಮವಾದ ಕಲಾಭಿ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷರಂಗೋತ್ಸವ 2026 ಅನ್ನು ಡಾ. ಮೋಹನ್ ಆಳ್ವ ಅವರು ಉದ್ಘಾಟಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷ ಗುರು ರಾಕೇಶ್ ರೈ ಅಡ್ಕ ಅವರ ಸಾರಥ್ಯದಲ್ಲಿ ಕೇಂದ್ರದ ಮಕ್ಕಳಿಂದ ‘ಶ್ರೀ ದೇವಿ ಮಹಾತ್ಮೆ’ ಪ್ರಸಂಗದ ಯಕ್ಷಗಾನವು ವಿಶೇಷ ರಂಗಸಜ್ಜಿಕೆ ಮತ್ತು ಬೆಳಕಿನ ವಿನ್ಯಾಸದೊಂದಿಗೆ ಪ್ರದರ್ಶನಗೊಂಡಿತು.
ಕಲಾಭಿ (ರಿ.) ನ ಕಲಾಭಿ ಯಕ್ಷಗಾನ ಅಧ್ಯಯನ ಕೇಂದ್ರದ ಕೊಡಮಾಡುವ ‘ಕಲಾಭಿ ಯಕ್ಷ ಯುವ ಪುರಸ್ಕಾರ’ವನ್ನು ಈ ಬಾರಿ ಕಟೀಲು ಮೇಳದ ಕಲಾವಿದರಾಗಿ ಸಾಧನೆ ಮಾಡುತ್ತಿರುವ ಯುವ ಯಕ್ಷಗಾನ ಕಲಾವಿದ ಶ್ರೀ ಪುನೀತ್ ರಾಜ್ ಬೋಳಿಯಾರು ಇವರಿಗೆ ನೀಡಲಾಯಿತು.
ಈ ವೇಳೆ ಕೇಂದ್ರದ ಗುರುಗಳು ಮತ್ತು ಇಂದಿನ ದೇವಿ ಮಹಾತ್ಮೆ ಪ್ರಸಂಗದ ನಿರ್ದೇಶಕರಾದ ಯಕ್ಷ ಗುರು ಶ್ರೀ ರಾಕೇಶ್ ರೈ ಅಡ್ಕ ಮತ್ತು ಸಂಪೂರ್ಣ ಸಹಕಾರ ಒದಗಿಸಿದ ಶ್ರೀ ವಿದ್ಯಾಭೂಷಣ್ ಪಂಜಾಜೆ ಇವರನ್ನು ಸನ್ಮಾನಿಸಲಾಯಿತು.
ಡಾಕ್ಟರ್ ಮೋಹನ್ ಆಳ್ವ ಮಾತನಾಡುತ್ತಾ ಇಂದಿನ ಕಾಲಘಟ್ಟದಲ್ಲಿ ಕಲಾಭಿ ಥಿಯೇಟರ್ ತನ್ನ ಸಾಧನೆ ಯುವಕರ ತಂಡ ಈ ಕಲಾ ಗ್ರಾಮದಲ್ಲಿ ನಾಟಕ, ನಾಟ್ಯ, ಯಕ್ಷಗಾನ ತರಬೇತಿಗಳನ್ನು ನೀಡುತ್ತಾ ರಂಗ ಪಯಣವನ್ನು ಮುನ್ನಡೆಸುವುದು ಶ್ಲಾಘನೀಯ. ಈ ಕಲಾಭಿಯ ಹಿಂದೆ ಇರುವ ಎಲ್ಲಾ ಕಲಾವಿದರ, ಮುಖ್ಯವಾಗಿ ಉಜ್ವಲ್ ಯು.ವಿ ಅವರ ಶ್ರಮ ಮೆಚ್ಚತಕ್ಕದ್ದು ಎಂದರು. ರಾಜ್ಯದಾದ್ಯಂತ ಹಾಗು ಹೊರ ರಾಜ್ಯಗಳಲ್ಲಿ ಪ್ರದರ್ಶನ ನೀಡಿದ ಕಲಾಭಿ ಸಂಸ್ಥೆಯ ಸಾಧನೆ ಅಪಾರ ಎಂದು ಕಲಾಭಿಯ ಯುವ ಕಲಾವಿದರಿಗೆ ಮತ್ತು ಪುಟ್ಟ ಮಕ್ಕಳಿಗೆ ಈ ಸಂದರ್ಭದಲ್ಲಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲಾಭಿಯ ಗೌರವ ಸಲಹೆಗಾರರಾದ ಡಾಕ್ಟರ್ ಮೀನಾಕ್ಷಿ ರಾಮಚಂದ್ರ ಅವರು ಮಾತನಾಡುತ್ತಾ ಕಲೆಗಾಗಿ ಕಲಾವಿದನ ಶ್ರಮ ಎಷ್ಟು ಎಂಬುವುದು ನಾವು ಕಲಾವಿದರಾದರೆ ಮಾತ್ರ ತಿಳಿಯಲು ಸಾಧ್ಯ, ನಿರಂತರ ಸಾಧನೆಯಿಂದ ಮಾತ್ರ ಕಲಾವಿದ ಉತ್ತಮ ಸ್ಥಾನಕ್ಕೆ ಏರಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲರಾದ ಮಹೇಶ್ ಜೋಗಿ ಶಕ್ತಿನಗರ ಮತ್ತು ಕಲಾವಿಯ ಪೋಷಕರು ಮತ್ತು ಕಲಾಭಿಯ ಉಪಾಧ್ಯಕ್ಷರಾದ ಸುಮನ್ ಕದ್ರಿ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









