ಮಂಗಳೂರು : ಬಿಜೆಪಿಯ ಹಿರಿಯ ನಾಯಕ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ (KFDC) ಮಾಜಿ ಅಧ್ಯಕ್ಷರಾದ ರಾಮಚಂದ್ರ ಬೈಕಂಪಾಡಿ (75) ಅವರು ನಿಧನರಾಗಿದ್ದಾರೆ. ಸಾಹಿತ್ಯ, ನಾಟಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ದಶಕಗಳ ಕಾಲ ಸಕ್ರಿಯರಾಗಿದ್ದ ಅವರು, ಎಂ.ಎ ಪದವೀಧರರಾಗಿ ಒಬ್ಬ ಮೇಧಾವಿ ನಾಯಕರಾಗಿ ಗುರುತಿಸಿಕೊಂಡಿದ್ದರು. ಆರಂಭದಲ್ಲಿ ನಾಟಕಕಾರರಾಗಿ ಜನಪ್ರಿಯತೆ ಗಳಿಸಿದ್ದ ಅವರು, ನಂತರದ ದಿನಗಳಲ್ಲಿ ತಮ್ಮ ಜೀವನವನ್ನು ಸಂಪೂರ್ಣವಾಗಿ ಸಮಾಜ ಸೇವೆಗೆ ಸಮರ್ಪಿಸಿಕೊಂಡಿದ್ದರು. ಮೊಗವೀರ ಸಮಾಜದ ಪ್ರಬಲ ಧ್ವನಿಯಾಗಿದ್ದ ಬೈಕಂಪಾಡಿ ಅವರು ನಿಸ್ವಾರ್ಥ ರಾಜಕಾರಣಕ್ಕೆ ಮಾದರಿಯಾಗಿದ್ದರು.
ರಾಜಕೀಯವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರಮಾಪ್ತರಾಗಿದ್ದ ಇವರು, 2013ರಲ್ಲಿ ಯಡಿಯೂರಪ್ಪನವರು ಕೆಜೆಪಿ ಪಕ್ಷ ಸ್ಥಾಪಿಸಿದಾಗ ಅವರ ಜೊತೆ ನಿಂತಿದ್ದರು. ಆ ಚುನಾವಣೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಿಎಸ್ ವೈ ಮತ್ತು ಇವರ ನಡುವಿನ ಸಂಬಂಧ ಕೇವಲ ರಾಜಕೀಯವಾಗಿರದೆ ಅತ್ಯಂತ ಭಾವನಾತ್ಮಕವಾಗಿತ್ತು. ಹಿಂದೆ ಬೈಕಂಪಾಡಿ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದಾಗ, ಅದರ ಸಂಪೂರ್ಣ ವೆಚ್ಚವನ್ನು ಯಡಿಯೂರಪ್ಪನವರೇ ಭರಿಸಿದ್ದರು ಎಂಬುದು ಇವರ ನಡುವಿನ ಆತ್ಮೀಯತೆಗೆ ಸಾಕ್ಷಿ. ನಂತರ ಬಿಎಸ್ ವೈ ಅವರೊಂದಿಗೆ ಮತ್ತೆ ಮಾತೃಪಕ್ಷ ಬಿಜೆಪಿಗೆ ಮರಳಿದ ಅವರು, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗೂ ಇವರು ಉತ್ತಮ ಒಡನಾಟ ಹೊಂದಿದ್ದರು.
ಪರಿಸರ ಪ್ರೇಮಿಯಾಗಿ ಮತ್ತು ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ರಾಮಚಂದ್ರ ಬೈಕಂಪಾಡಿ ಅವರ ಪರಿಸರ ಕಾಳಜಿಯನ್ನು ಗುರುತಿಸಿ ಕರ್ನಾಟಕ ಸರ್ಕಾರವು 2021ರಲ್ಲಿ ಅವರಿಗೆ ‘ರಾಜ್ಯ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಇದರೊಂದಿಗೆ ಜಿಲ್ಲಾ ರಾಜ್ಯೋತ್ಸವ ಸೇರಿದಂತೆ ಹತ್ತು ಹಲವು ಪುರಸ್ಕಾರಗಳು ಅವರಿಗೆ ಲಭಿಸಿವೆ. ಅವರ ನಿಧನಕ್ಕೆ ನಾಡಿನ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದು, ಕರ್ನಾಟಕದ ಕರಾವಳಿ ಭಾಗವು ಒಬ್ಬ ಪ್ರಾಮಾಣಿಕ ಹೋರಾಟಗಾರನನ್ನು ಹಾಗೂ ಪರಿಸರ ಪ್ರೇಮಿಯನ್ನು ಕಳೆದುಕೊಂಡಂತಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









