ತಮ್ಮ ವಿರುದ್ಧ ಕೇಳಿಬಂದಿರುವ ಸುಳ್ಳು ಆರೋಪಗಳ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಸುರೇಶ್, ರಾಜಕೀಯ ಭವಿಷ್ಯಕ್ಕೆ ಕಪ್ಪುಚುಕ್ಕೆ ಇಡುವ ದುರಾಸೆಯಿಂದ ಕೆಲವರು ಈ ಅಪಪ್ರಚಾರ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ. ನನ್ನ ಪ್ರಾಮಾಣಿಕತೆಯೇ ನನಗೆ ಶ್ರೀರಕ್ಷೆಯಾಗಿದ್ದು, ಇಂತಹ ವ್ಯವಸ್ಥಿತ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ಆ ಪರಮಾತ್ಮನಿಗೆ ಗೊತ್ತು. ಈ ಕೃತ್ಯ ಎಸಗಿದ ‘ಬುರುಡೆ ಗ್ಯಾಂಗ್’ಗೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯೇ ತಕ್ಕ ಶಿಕ್ಷೆ ಕೊಟ್ಟಿದ್ದಾನೆ ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.
ತಾವು ಯಾವುದೇ ತಾಯಿಗೆ ದ್ರೋಹ ಬಗೆಯುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಸುರೇಶ್, ಪಕ್ಷದ ಒಳಗೆ ಅಥವಾ ಹೊರಗೆ ಈ ಕುತಂತ್ರ ನಡೆಸಿರುವ ಯಾರ ಮೇಲೂ ವೈಯಕ್ತಿಕವಾಗಿ ಆರೋಪ-ಪ್ರತ್ಯಾರೋಪ ಮಾಡಲು ಬಯಸುವುದಿಲ್ಲ ಎಂದಿದ್ದಾರೆ. ಎಲ್ಲದಕ್ಕೂ ಭಗವಂತನೇ ಸಾಕ್ಷಿಯಾಗಿದ್ದು, ನಾನು ಯಾರಿಗೂ ಹೆದರದೆ ನಿರ್ಭಯವಾಗಿ ದೇವರ ಮುಂದೆ ನಿಂತು ಆಣೆ ಪ್ರಮಾಣ ಮಾಡಿ ನನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಿದ್ದೇನೆ. ಈ ಕುತಂತ್ರದ ಹಿಂದೆ ಹಾಸನದ ಮಾಜಿ ಶಾಸಕರೊಬ್ಬರ ಕೈವಾಡವಿದೆಯೇ ಎಂಬ ಮಾಧ್ಯಮಗಳ ನೇರ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ತಾವಿಲ್ಲಿ ಯಾರ ಮೇಲೂ ಗೂಬೆ ಕೂರಿಸುತ್ತಿಲ್ಲ, ಕೇವಲ ತಮ್ಮ ಪ್ರಾಮಾಣಿಕತೆಯನ್ನಷ್ಟೇ ದೈವದ ಸನ್ನಿಧಿಯಲ್ಲಿ ಪ್ರದರ್ಶಿಸುತ್ತಿರುವುದಾಗಿ ತಿಳಿಸಿದರು.
ಕ್ಷೇತ್ರದಲ್ಲಿ ತಾವು ಪಡುತ್ತಿರುವ ಶ್ರಮವನ್ನು ನೆನಪಿಸಿಕೊಂಡ ಶಾಸಕರು, ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಕಷ್ಟಪಟ್ಟು ಗೆಲುವು ಸಾಧಿಸಿದ್ದೇನೆ. ಪಕ್ಷ ಭೇದ ಮರೆತು ಸಾಮಾನ್ಯ ಕಾರ್ಯಕರ್ತನಂತೆ ಜನರೊಂದಿಗೆ ಬೆರೆತು ಕೆಲಸ ಮಾಡುತ್ತಿದ್ದೇನೆ. ಅಷ್ಟೇ ಅಲ್ಲದೆ, ವಿಧಾನಸಭೆಯ ಅಧಿವೇಶನಗಳಲ್ಲಿ ಮಧ್ಯರಾತ್ರಿ 2 ಗಂಟೆಯವರೆಗೂ ಕುಳಿತು ರಾಜ್ಯದ ಹಾಗೂ ತಮ್ಮ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಪರವಾಗಿ ಧ್ವನಿ ಎತ್ತುತ್ತಿರುವುದಾಗಿ ಹೆಮ್ಮೆಯಿಂದ ಹೇಳಿದರು.
ತಮ್ಮ ಕ್ಷೇತ್ರಕ್ಕೆ ವಿಶ್ವನಾಯಕರಾದ ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ಬಂದು ಪ್ರಚಾರ ನಡೆಸಿದ್ದಾರೆ ಎಂಬುದನ್ನು ಹೆಮ್ಮೆಯಿಂದ ಸ್ಮರಿಸಿದ ಶಾಸಕರು, ನಮ್ಮೊಂದಿಗೆ ಬಿ.ಎಸ್. ಯಡಿಯೂರಪ್ಪನವರಂತಹ ಮಹಾನ್ ನಾಯಕರ ಬೆಂಬಲವಿದೆ ಎಂದರು. ಸಾರ್ವಜನಿಕ ಜೀವನದಲ್ಲಿ ಶಿಸ್ತು ಹಾಗೂ ಪ್ರಾಮಾಣಿಕತೆಯಿಂದ ಮುನ್ನಡೆಯುತ್ತಿರುವ ತಮಗೆ ಭಗವಂತನೇ ಅಂತಿಮ ನ್ಯಾಯ ನೀಡಲಿದ್ದಾನೆ ಎಂಬ ಅಚಲ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










