ಮಂಗಳೂರು : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಅರಾಫತ್ ಅಲಿ ಎಂಬಾತನಿಗೆ ಎನ್ಐಎ ವಿಶೇಷ ನ್ಯಾಯಾಲಯವು ಆರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಈತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಕ್ರಿಪ್ಟೋ ಕರೆನ್ಸಿ ಮೂಲಕ ಮಾಝ್ ಮುನೀರ್ ಮತ್ತು ಮೊಹಮ್ಮದ್ ಶಾರೀಕ್ ಅವರಂತಹ ಆರೋಪಿಗಳಿಗೆ ಹಣಕಾಸು ಪೂರೈಕೆ ಮಾಡುತ್ತಿದ್ದನು. ಭಾರತದಲ್ಲಿ ಐಸಿಸ್ ಸಿದ್ಧಾಂತವನ್ನು ಬಿತ್ತಿ, ಯುವಕರನ್ನು ಉಗ್ರ ಸಂಘಟನೆಗೆ ಸೇರ್ಪಡೆಗೊಳಿಸುವಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ ಎಂದು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಚಾರ್ಜ್ಶೀಟ್ನಲ್ಲಿ ಸಾಬೀತಾಗಿದೆ.
ಈ ಪ್ರಕರಣದ ತನಿಖೆ 2022ರಲ್ಲಿ ಚುರುಕುಗೊಂಡಿದ್ದು, ಈ ಮೊದಲು 2025ರ ನವೆಂಬರ್ನಲ್ಲಿ ಪ್ರಕರಣದ ಇತರ ಆರೋಪಿಗಳಾದ ಮಾಝ್ ಮುನೀರ್ ಅಹ್ಮದ್ ಮತ್ತು ಸೈಯದ್ ಯಾಸಿನ್ಗೆ ಆರು ವರ್ಷಗಳ ಶಿಕ್ಷೆ ಘೋಷಿಸಲಾಗಿತ್ತು. ಮಂಗಳೂರಿನ ಕದ್ರಿ ಗೋಡೆ ಬರಹ ಮತ್ತು 2022ರ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಉಗ್ರರಿಗೆ ಅರಾಫತ್ ಅಲಿ ಆರ್ಥಿಕ ಶಕ್ತಿಯಾಗಿ ನಿಂತಿದ್ದನು. ಕೆನ್ಯಾದಲ್ಲಿದ್ದ ಈತನನ್ನು 2023ರ ಸೆಪ್ಟೆಂಬರ್ನಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆಗಳು ನಾಟಕೀಯವಾಗಿ ಬಂಧಿಸಿದ್ದವು.
ಕರ್ನಾಟಕದಲ್ಲಿ ಐಸಿಸ್ ನೆಟ್ವರ್ಕ್ ಬೆಳೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಒಟ್ಟು 12 ಮಂದಿಯನ್ನು ಎನ್ಐಎ ಬಂಧಿಸಿತ್ತು. ಇದೀಗ ಅರಾಫತ್ ಅಲಿ ಸೇರಿದಂತೆ ಮೂವರು ಆರೋಪಿಗಳಿಗೆ ಶಿಕ್ಷೆ ಜಾರಿಯಾಗಿದ್ದು, ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಸಿರಿಯಾ ಮೂಲದ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಅರಾಫತ್, ಯುವಕರನ್ನು ಹಾದಿತಪ್ಪಿಸಿ ದೇಶವಿರೋಧಿ ಕೃತ್ಯಗಳಿಗೆ ಪ್ರೇರೇಪಿಸುತ್ತಿದ್ದ ಅಂಶವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಈ ಶಿಕ್ಷೆ ಪ್ರಕಟಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









