ಚೆನ್ನೈ : ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ನಟ ಜೋಸೆಫ್ ವಿಜಯ್ ಅವರು ಭಾನುವಾರ ಬೆಳಿಗ್ಗೆ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಅಧಿಕಾರ ಗೌಪ್ಯತೆಯ ಬೋಧನೆ ಮಾಡಿದರು. ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ದ್ರಾವಿಡ ಪಕ್ಷಗಳ ಸಂಪ್ರದಾಯವನ್ನು ಮುರಿದು, ಡಿಎಂಕೆಯ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮೊದಲ ದ್ರಾವಿಡಯೇತರ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದೆ.
ಆದರೆ, ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಮೈತ್ರಿ ಪಕ್ಷವಾದ ಸಿಪಿಐ (CPI) ತೀವ್ರ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ. ಪ್ರಮಾಣ ವಚನ ಸಮಾರಂಭದಲ್ಲಿ ಅನುಸರಿಸಲಾದ ಗೀತೆಗಳ ಶಿಷ್ಟಾಚಾರದ (Protocol) ಕುರಿತು ಸಿಪಿಐ ನಾಯಕ ಎಂ. ವೀರಪಾಂಡಿಯನ್ ಆಕ್ಷೇಪ ಎತ್ತಿದ್ದಾರೆ. ಸಮಾರಂಭದಲ್ಲಿ ಮೊದಲು ‘ವಂದೇ ಮಾತರಂ’, ನಂತರ ರಾಷ್ಟ್ರಗೀತೆ ‘ಜನಗಣಮನ’ ಹಾಗೂ ಕೊನೆಯಲ್ಲಿ ತಮಿಳು ರಾಜ್ಯಗೀತೆ ‘ತಮಿಳ್ ತಾಯಿ ವಾಳ್ತು’ ಹಾಡಿಸಲಾಗಿತ್ತು. ಈ ಕ್ರಮವು ತಮಿಳು ಪರಂಪರೆಗೆ ಮಾಡಿದ ಅಪಮಾನ ಮತ್ತು ಸ್ಥಾಪಿತ ಸಂಪ್ರದಾಯದ ಉಲ್ಲಂಘನೆ ಎಂದು ಅವರು ಆರೋಪಿಸಿದ್ದಾರೆ.
ತಮಿಳುನಾಡಿನ ಸರ್ಕಾರಿ ಕಾರ್ಯಕ್ರಮಗಳು ನಿಯಮದಂತೆ ರಾಜ್ಯಗೀತೆಯೊಂದಿಗೆ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳ್ಳಬೇಕು, ಆದರೆ ಇಲ್ಲಿ ರಾಜ್ಯಗೀತೆಯನ್ನು ಮೂರನೇ ಸ್ಥಾನಕ್ಕೆ ತಳ್ಳಲಾಗಿದೆ ಎಂಬುದು ಸಿಪಿಐ ವಾದವಾಗಿದೆ. ಅಷ್ಟೇ ಅಲ್ಲದೆ, ವಂದೇ ಮಾತರಂ ಗೀತೆಯು ಧಾರ್ಮಿಕ ಪಂಗಡೀಯ ಸ್ವಭಾವ ಹೊಂದಿದೆ ಎಂದು ಟೀಕಿಸಿರುವ ವೀರಪಾಂಡಿಯನ್, ಈ ಪ್ರಮಾದಕ್ಕೆ ಯಾರು ಹೊಣೆ ಎಂದು ಸರ್ಕಾರ ವಿವರಣೆ ನೀಡಬೇಕು ಹಾಗೂ ಇಂತಹ ತಪ್ಪು ಮರುಕಳಿಸದಂತೆ ಟಿವಿಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಷ್ಟ್ರೀಯ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









