ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ ಒಂದು ವರ್ಷ ಚಿನ್ನ ಖರೀದಿ ಮಾಡಬೇಡಿ ಮತ್ತು ವಾಹನಗಳ ಬಳಕೆಯನ್ನು ಮಿತಗೊಳಿಸಿ ಎಂದು ನೀಡಿರುವ ಕರೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಟೀಕಿಸಿದ್ದಾರೆ. ಪ್ರಧಾನಿಯವರ ಈ ನಡೆಯು ‘ಕುಣಿಯಲಾರದವನು ನೆಲ ಡೊಂಕು’ ಎಂದಂತೆ ಇದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಸರ್ಕಾರದ ಆರ್ಥಿಕ ವೈಫಲ್ಯಗಳನ್ನು ಮುಚ್ಚಿ ಹಾಕಲು ಇಂತಹ ಬಾಲಿಶ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ಒಂದೆಡೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದ್ದು, ದಿನಬಳಕೆಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಪ್ರಧಾನಿಯವರು ‘ಆತ್ಮನಿರ್ಭರ ಭಾರತ’ದ ಹೆಸರಿನಲ್ಲಿ ವಾಹನ ಮತ್ತು ಉದ್ಯಮ ವಲಯಕ್ಕೆ ಪ್ರೋತ್ಸಾಹ ನೀಡುವಂತೆ ಮಾತನಾಡುತ್ತಾರೆ, ಆದರೆ ಇನ್ನೊಂದೆಡೆ ವಾಹನ ಬಳಕೆಯನ್ನು ಕಡಿಮೆ ಮಾಡಿ ಎನ್ನುತ್ತಾರೆ. ಇಂತಹ ಪರಸ್ಪರ ವಿರುದ್ಧವಾದ ಹೇಳಿಕೆಗಳಿಂದ ವಾಹನ ಉದ್ಯಮ ಮತ್ತು ಸ್ವರ್ಣೋದ್ಯಮಕ್ಕೆ ಭಾರಿ ಹೊಡೆತ ಬೀಳಲಿದೆ. ಈ ನಷ್ಟಕ್ಕೆ ಯಾರು ಹೊಣೆ ಎಂದು ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.
ದೇಶವನ್ನು ಈಗಾಗಲೇ ಸಾಲದ ಕೂಪಕ್ಕೆ ತಳ್ಳಲಾಗಿದ್ದು, ಈಗ ಅವಿವೇಕದ ಹೇಳಿಕೆಗಳ ಮೂಲಕ ಉದ್ಯಮ ವಲಯವನ್ನು ನಷ್ಟಕ್ಕೆ ಸಿಲುಕಿಸಿ ಜನಸಾಮಾನ್ಯರಿಗೆ ಬರೆ ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಆಡಳಿತ ನಡೆಸಲು ಅಸಮರ್ಥರಾದವರು ಮಾತ್ರ ಇಂತಹ ಹೇಳಿಕೆಗಳನ್ನು ನೀಡಲು ಸಾಧ್ಯ ಎಂದು ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ಧೋರಣೆಯು ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









