ಸುರತ್ಕಲ್ ಸಮೀಪದ ಕಾನ-ತೋಕೂರು-ಜೋಕಟ್ಟೆ ಮುಖ್ಯ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಹೊಂಡಗುಂಡಿಗಳಿಂದ ತುಂಬಿರುವುದನ್ನು ಪ್ರತಿಭಟಿಸಿ, ಇಂದು ಕಾನ ಜಂಕ್ಷನ್ ಬಳಿ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು. ಡಿವೈಎಫ್ಐ ಕಾನ ಘಟಕ, ಆಟೋ ರಿಕ್ಷಾ ಚಾಲಕರ ಸಂಘ (ಸಿಐಟಿಯು) ಮತ್ತು ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ರಸ್ತೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಆಗ್ರಹಿಸಲಾಯಿತು. ರಸ್ತೆಯ ದಯನೀಯ ಸ್ಥಿತಿಯಿಂದಾಗಿ ಸಾರ್ವಜನಿಕರು ಮತ್ತು ವಾಹನ ಸವಾರರು ಪ್ರತಿನಿತ್ಯ ಸಂಕಷ್ಟ ಅನುಭವಿಸುತ್ತಿರುವುದಕ್ಕೆ ಇಲ್ಲಿ ಆಕ್ರೋಶ ವ್ಯಕ್ತವಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಅವರು, ಎಂಎಸ್ಇಜೆಡ್ (MSEZ) ಮತ್ತು ಎಂಆರ್ಪಿಎಲ್ (MRPL) ಕಂಪನಿಗಳು ನಿರ್ವಹಿಸಬೇಕಾದ ಈ ರಸ್ತೆಯು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ದೂರಿದರು. ಜನಪ್ರತಿನಿಧಿಗಳು ಕಂಪನಿಗಳ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸುವಲ್ಲಿ ವಿಫಲರಾಗಿದ್ದಾರೆ ಮತ್ತು ಈ ರಸ್ತೆ ಗುಂಡಿಗಳ ಕಾರಣದಿಂದಲೇ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಸರಿಯಿಲ್ಲದ ಕಾರಣ ಅಪಘಾತಗಳು ಸಂಭವಿಸಿದಾಗ ಪೊಲೀಸರು ಅದರ ನಿರ್ವಹಣೆಯ ಜವಾಬ್ದಾರಿ ಹೊತ್ತವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ ಮುಂದಿನ 15 ದಿನಗಳ ಒಳಗಾಗಿ ಕಾನ-ಜೋಕಟ್ಟೆ ರಸ್ತೆಯ ದುರಸ್ತಿ ಕಾರ್ಯ ಆರಂಭವಾಗದಿದ್ದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಲಾಯಿತು. ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸುರತ್ಕಲ್ ಚರ್ಚ್ ಉಪಾಧ್ಯಕ್ಷ ಲಿಗೋರಿ ಜಾರ್ಜ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಮತ್ತು ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









