ಉಡುಪಿ : ಹಿಂದೂ-ಮುಸ್ಲಿಂ ಭಾವೈಕ್ಯತೆ ಮತ್ತು ಮಾನವೀಯತೆಯನ್ನು ಎತ್ತಿಹಿಡಿಯುವ ಅತ್ಯಂತ ಅಪರೂಪದ ಹಾಗೂ ಹೃದಯಸ್ಪರ್ಶಿ ಘಟನೆಯೊಂದು ಬೆಳಕಿಗೆ ಬಂದಿದೆ. ಸರ್ಕಾರದಿಂದ ನಿವೇಶನ ಮಂಜೂರಾಗಿದ್ದರೂ ಅರಣ್ಯ ಇಲಾಖೆಯ ತಾಂತ್ರಿಕ ಅಡ್ಡಿಗಳಿಂದಾಗಿ ಕಳೆದ 35 ವರ್ಷಗಳಿಂದ ಮನೆ ಕಟ್ಟಲಾಗದೆ ಕಣ್ಣೀರಿನಲ್ಲೇ ಕೈತೊಳೆಯುತ್ತಿದ್ದ ಬಡ ಹಿಂದೂ ವಿಧವೆ ಮಹಿಳೆಯ ಪರವಾಗಿ ನೆರೆಮನೆಯ ಮುಸ್ಲಿಂ ಮಹಿಳೆಯರು ಧ್ವನಿಯೆತ್ತಿದ್ದಾರೆ. ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಖುದ್ದಾಗಿ ಭೇಟಿಯಾದ ಮುಸ್ಲಿಂ ಮಹಿಳೆಯರ ತಂಡ, ಸಂತ್ರಸ್ತ ಹಿಂದೂ ಮಹಿಳೆಗೆ ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕಿ ಮನವಿ ಮಾಡುವ ಮೂಲಕ ಸಮಾಜಕ್ಕೆ ಸಾಮರಸ್ಯದ ಸಂದೇಶ ನೀಡಿದ್ದಾರೆ.
ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದ ನಿವಾಸಿ ಗಿರಿಜಾ ಶೆಟ್ಟಿಗಾರ್ ಎಂಬ ವೃದ್ಧೆ ಪತಿಯನ್ನು ಕಳೆದುಕೊಂಡು ಸದ್ಯ ಒಬ್ಬಂಟಿಯಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ 1989ರಲ್ಲೇ ಭೂರಹಿತರ ಯೋಜನೆಯಡಿ 5 ಸೆಂಟ್ಸ್ ವಸತಿ ನಿವೇಶನ ಮಂಜೂರಾಗಿ ಹಕ್ಕುಪತ್ರ ಸಿಕ್ಕಿತ್ತಾದರೂ, ಆ ಜಾಗವು ರಕ್ಷಿತಾರಣ್ಯ ವ್ಯಾಪ್ತಿಗೆ ಸೇರಿದ್ದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಜಾಗದ ಸ್ವಾಧೀನಕ್ಕೆ ಅಡ್ಡಿಪಡಿಸಿದ್ದರು. ಆರ್ಥಿಕವಾಗಿ ತೀರಾ ಹಿಂದುಳಿದಿದ್ದ ಗಿರಿಜಾ ಅವರಿಗೆ ಅಧಿಕಾರಿಗಳ ವಿರುದ್ಧ ಹೋರಾಡುವ ಶಕ್ತಿ ಇರಲಿಲ್ಲ. ಇದನ್ನು ಮನಗಂಡ ನೆರೆಮನೆಯ ಸಲಹುದ್ದೀನ್ ಎಂಬುವವರ ಕುಟುಂಬಸ್ಥರು ಕಳೆದ ಕೆಲವು ಸಮಯದಿಂದ ಗಿರಿಜಾ ಅವರನ್ನು ವಿವಿಧ ಕಚೇರಿಗಳಿಗೆ ಕರೆದೊಯ್ದು ಭೂಮಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಪ್ರಸ್ತುತ ದಾನಿಗಳು ಮನೆ ಕಟ್ಟಿಕೊಡಲು ಸಿದ್ಧರಿದ್ದರೂ ಜಾಗದ ಸಮಸ್ಯೆ ಮುಂದುವರಿದಿದ್ದರಿಂದ, ಮುಸ್ಲಿಂ ಮಹಿಳೆಯರು ನೇರವಾಗಿ ಸಚಿವರ ಮೊರೆ ಹೋಗಿದ್ದಾರೆ.
ಸಚಿವೆಯ ತಂಗುದಾಣಕ್ಕೆ ಗಿರಿಜಾ ಶೆಟ್ಟಿಗಾರ್ ಅವರನ್ನು ಕರೆದುಕೊಂಡು ಬಂದ ನೆರೆಹೊರೆಯ ಮುಸ್ಲಿಂ ಮಹಿಳೆಯರು, “ನಮಗೇನೂ ಬೇಡ, ಈ ಬಡ ಜೀವಕ್ಕೊಂದು ಆಸರೆ ಕಲ್ಪಿಸಿಕೊಡಿ” ಎಂದು ಸಚಿವರ ಮುಂದೆ ಕಣ್ಣೀರಿಟ್ಟರು. ಮುಸ್ಲಿಂ ಮಹಿಳೆಯರ ಈ ಮಾನವೀಯ ಗುಣವನ್ನು ಕಂಡು ಭಾವುಕರಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, “ಇದೇ ನೋಡಿ ನಮ್ಮ ನೈಜ ಭಾರತದ ಸಂಸ್ಕೃತಿ. ಹಿಂದೂ ಮಹಿಳೆಯ ಕಷ್ಟಕ್ಕೆ ಮುಸ್ಲಿಂ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ, ಉಡುಪಿಯ ಬಿಜೆಪಿ ನಾಯಕರು ಇವರನ್ನು ನೋಡಿ ಕಲಿಯಬೇಕು” ಎಂದು ಮಾರ್ಮಿಕವಾಗಿ ನುಡಿದರು. ಅಲ್ಲದೆ, ತಕ್ಷಣವೇ ಕಾರ್ಯಪ್ರವೃತ್ತರಾದ ಸಚಿವರು, ಮಾನವೀಯ ಆಧಾರದ ಮೇಲೆ ವೃದ್ಧೆಗೆ ಅದೇ ಜಾಗದ ವಾಸ್ತವ್ಯ ಕಲ್ಪಿಸಲು ಅಥವಾ ಪರ್ಯಾಯ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲೇ ಖಡಕ್ ಸೂಚನೆ ನೀಡಿ ಭರವಸೆ ನೀಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









