ಮಂಗಳೂರು : ರಾಜ್ಯದ ಕರಾವಳಿ ತೀರದಲ್ಲಿ ಸಮುದ್ರದ ಅಲೆಗಳ ಅಬ್ಬರ ಹಾಗೂ ಗಾಳಿಯ ವೇಗ ತೀವ್ರಗೊಳ್ಳುವ ಮುನ್ಸೂಚನೆ ಇರುವುದರಿಂದ ಮೀನುಗಾರರು ಮುಂದಿನ ಎರಡು ದಿನಗಳ ಕಾಲ ಸಮುದ್ರಕ್ಕೆ ಇಳಿಯಬಾರದು ಎಂದು ಭಾರತೀಯ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಕರಾವಳಿ ಭಾಗದ ಸಮುದ್ರ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಭಾರಿ ಪ್ರಮಾಣದ ಗಾಳಿ ಬೀಸಲಿದ್ದು, ಅಲೆಗಳ ಅಬ್ಬರವೂ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮೀನುಗಾರರು ಕಡಲಿಗೆ ಇಳಿಯದಂತೆ ಮತ್ತು ಸುರಕ್ಷಿತವಾಗಿರಲು ಕಟ್ಟುನಿಟ್ಟಿನ ಸಲಹೆ ನೀಡಲಾಗಿದೆ.
ಇದೇ ವೇಳೆ ರಾಜ್ಯದ ವಿವಿಧೆಡೆ ವ್ಯಾಪಕ ಮಳೆಯಾಗುತ್ತಿದ್ದು, ಕರಾವಳಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ, ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ. ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಗರಿಷ್ಠ 7 ಸೆಂಟಿಮೀಟರ್ ಮಳೆ ದಾಖಲಾಗಿದ್ದರೆ, ಹಾವೇರಿಯಲ್ಲಿ 5 ಸೆಂಟಿಮೀಟರ್ ಮಳೆಯಾಗಿದೆ. ಇದರೊಂದಿಗೆ ಮೂಡಬಿದ್ರೆ, ಶಿವಮೊಗ್ಗ, ಹುಂಚದಕಟ್ಟೆ ಹಾಗೂ ಕೊಟ್ಟಿಗೆಹಾರದಲ್ಲಿ ತಲಾ 4 ಸೆಂಟಿಮೀಟರ್ ಮತ್ತು ಉಪ್ಪಿನಂಗಡಿ, ಪುತ್ತೂರು, ಸುಳ್ಯ, ಶೃಂಗೇರಿ ಹಾಗೂ ಭಾಗಮಂಡಲ ತಾಲೂಕುಗಳಲ್ಲಿ ತಲಾ 3 ಸೆಂಟಿಮೀಟರ್ನಷ್ಟು ಗಮನಾರ್ಹ ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









