ಮಂಗಳೂರು : ಕರಾವಳಿ ಭಾಗದ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಂಗಳೂರನ್ನು ಪ್ರತ್ಯೇಕ ರೈಲ್ವೆ ವಿಭಾಗವನ್ನಾಗಿ ಮಾಡುವ ನಿಟ್ಟಿನಲ್ಲಿ ಗಂಭೀರ ಚಿಂತನೆಗಳು ನಡೆಯುತ್ತಿದ್ದು, ಈ ಕುರಿತು ಶೀಘ್ರದಲ್ಲೇ ಸಭೆ ನಡೆಸಲಾಗುವುದು. ಪ್ರಸ್ತುತ ಮಂಗಳೂರು ಮೂರು ಬೇರೆ ಬೇರೆ ರೈಲ್ವೆ ವಿಭಾಗಗಳಲ್ಲಿ ಹಂಚಿಹೋಗಿರುವುದರಿಂದ ಸಮಸ್ಯೆ ಎದುರಾಗುತ್ತಿದ್ದು, ಇದನ್ನು ಸ್ವತಂತ್ರ ವಿಭಾಗವಾಗಿ ರೂಪಿಸಿದರೆ ಪ್ರಯಾಣಿಕರಿಗೆ ಮತ್ತು ಕರಾವಳಿ ಭಾಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಇದರೊಂದಿಗೆ ಸುಬ್ರಹ್ಮಣ್ಯ ಮತ್ತು ಸಕಲೇಶಪುರ ನಡುವಿನ 55 ಕಿಲೋಮೀಟರ್ ರೈಲು ಮಾರ್ಗದ ವಿದ್ಯುದೀಕರಣ ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಇನ್ನು ಕೇವಲ ಒಂದು ತಿಂಗಳ ಅವಧಿಯೊಳಗೆ ಬಹುನಿರೀಕ್ಷಿತ ಮಂಗಳೂರು-ಬೆಂಗಳೂರು ನಡುವಿನ ‘ವಂದೇ ಭಾರತ್’ ರೈಲು ಸಂಚಾರ ಅಧಿಕೃತವಾಗಿ ಆರಂಭವಾಗಲಿದೆ ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ .
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಹಾಗೂ 55 ಕೇಸ್ಗಳ ವಾಪಸ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಹಳೆಯ 55 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವ ನಿರ್ಧಾರದ ವಿರುದ್ಧ ಕೇಂದ್ರ ಸಚಿವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವುದು ಒಂದು ದಿಕ್ಕಿಲ್ಲದ ‘ತೊದಲುಗೊಂಬೆ’ ಸರ್ಕಾರವಾಗಿದ್ದು, ಇದು ಯಾವಾಗ ಅಧಿಕಾರದಿಂದ ತೊಲಗುತ್ತದೆಯೋ ಯಾರಿಗೂ ಗೊತ್ತಿಲ್ಲ. ಏಳು ಬಾರಿ ಶಾಸಕನಾಗಿ, ಮಂತ್ರಿಯಾಗಿ ರಾಜ್ಯ ರಾಜಕಾರಣವನ್ನು ಹತ್ತಿರದಿಂದ ಕಂಡಿರುವ ತಮಗೆ ಈ ಸರ್ಕಾರದಲ್ಲಿ ಯಾವುದೇ ಇಚ್ಛಾಶಕ್ತಿ ಕಾಣಿಸುತ್ತಿಲ್ಲ. ಸರ್ಕಾರವು ಸದ್ಯ ನಿಂತ ನೀರಾಗಿದ್ದು, ಕೇವಲ ಓಲೈಕೆ ರಾಜಕಾರಣ ಮತ್ತು ಸ್ವಂತ ಕಾರ್ಯಸೂಚಿಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಪಾಪದ ಕೆಲಸ ಮಾಡುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಆದರೆ, ಇಂತಹ ಜನವಿರೋಧಿ ಧೋರಣೆಗಳಿಗೆ ರಾಜ್ಯದ ಜನತೆ ಶೀಘ್ರದಲ್ಲೇ ಸೂಕ್ತ ಪಾಠ ಕಲಿಸಲಿದ್ದಾರೆ ಮತ್ತು ಅವರ ಪಾಪಕ್ಕೆ ಪ್ರಾಯಶ್ಚಿತ್ತವಾಗುವ ಕಾಲ ಹತ್ತಿರ ಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮತ್ತು ರಾಜ್ಯ ರಾಜಕಾರಣಕ್ಕೆ ಮರಳಿ ಬರುವಿಕೆ
ಬಿಜೆಪಿ ಪಕ್ಷದಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎಂಬ ತತ್ವವಿದೆ. ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯ ಬಗ್ಗೆ ತಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ಪಕ್ಷದಲ್ಲಿ ಕೆಲವು ಸಕಾರಾತ್ಮಕ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ವರಿಷ್ಠರು ಸಲಹೆಗಳನ್ನು ಕೇಳಿದ್ದರು. ರಾಜಕಾರಣದಲ್ಲಿ ತಮಗಿರುವ 48 ವರ್ಷಗಳ ಸುದೀರ್ಘ ಅನುಭವದ ಆಧಾರದ ಮೇಲೆ ಕೆಲವು ಉಪಯುಕ್ತ ಚಿಂತನೆಗಳು ಹಾಗೂ ಸಲಹೆಗಳನ್ನು ನೀಡಲಾಗಿದ್ದು, ಮುಂದಿನ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಪಕ್ಷದ ಹಿರಿಯ ನಾಯಕರು ಕೈಗೊಳ್ಳಲಿದ್ದಾರೆ. ಇನ್ನು ರಾಜ್ಯ ರಾಜಕಾರಣಕ್ಕೆ ಮರುಪ್ರವೇಶಿಸುವ ಕುರಿತು ಸದ್ಯಕ್ಕೆ ಯಾವುದೇ ಆಲೋಚನೆ ಇಲ್ಲ. ಪ್ರಧಾನಮಂತ್ರಿಯವರು ತಮಗೆ ಕೇಂದ್ರ ಸಚಿವ ಸ್ಥಾನದ ಜವಾಬ್ದಾರಿ ನೀಡಿದ್ದು, ದೇಶಾದ್ಯಂತ ಸಂಚರಿಸಿ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಹೆಚ್.ಡಿ. ದೇವೇಗೌಡರ ರಾಜ್ಯಸಭೆ ಆಯ್ಕೆ ಮತ್ತು ಎನ್ಡಿಎ ಮೈತ್ರಿ
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಎನ್ಡಿಎ ಮೈತ್ರಿಕೂಟದ ಪ್ರಮುಖ ಭಾಗವಾಗಿದ್ದಾರೆ. ಅವರನ್ನು ಮತ್ತೊಮ್ಮೆ ರಾಜ್ಯಸಭೆಗೆ ಪುನರಾಯ್ಕೆ ಮಾಡುವ ವಿಚಾರದ ಬಗ್ಗೆ ತಮಗೆ ಯಾವುದೇ ರೀತಿಯ ಪೂರ್ವ ಮಾಹಿತಿ ಇಲ್ಲ ಮತ್ತು ಈ ವಿಷಯದ ಕುರಿತು ಯಾರೂ ತಮ್ಮೊಂದಿಗೆ ಚರ್ಚಿಸಿಲ್ಲ. ದೇವೇಗೌಡರಂತಹ ಹಿರಿಯ ನಾಯಕರಿಗೆ ನೀಡಬೇಕಾದ ಸ್ಥಾನಮಾನಗಳ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ತಾನಲ್ಲ. ಆ ಕುರಿತು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ.
ನೀಟ್ (NEET) ಪರೀಕ್ಷೆ ಅಕ್ರಮ ಹಾಗೂ ಕಾಕ್ರೋಚ್ ಜನತಾ ಪಕ್ಷಕ್ಕೆ ವ್ಯಂಗ್ಯ
ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವು ನಿಜಕ್ಕೂ ದುರದೃಷ್ಟಕರ ಮತ್ತು ಇದು ಆಗಬಾರದಿತ್ತು. ಈ ದಂಧೆಯ ಹಿಂದೆ ಯಾರೇ ಇದ್ದರೂ ಅವರ ವಿರುದ್ಧ ಕೇಂದ್ರ ಸರ್ಕಾರವು ಕಠಿಣ ಕಾನೂನು ಕ್ರಮ ಕೈಗೊಳ್ಳಲಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವುದು ಖಚಿತ. ಇದೇ ವೇಳೆ ‘ಕಾಕ್ರೋಚ್ ಜನತಾ ಪಕ್ಷ’ದ ಕುರಿತು ಕೇಳಲಾದ ಪ್ರಶ್ನೆಗೆ ತೀವ್ರ ವ್ಯಂಗ್ಯವಾಡಿದ ಸಚಿವರು, ಭಾರತೀಯ ರಾಜಕಾರಣದಲ್ಲಿ ಇಂತಹ ಎಷ್ಟೋ ಪಕ್ಷಗಳು ಮಳೆಗಾಲದ ಅಣಬೆಗಳಂತೆ ಹುಟ್ಟಿ, ನಂತರ ಸುಳ್ಳನ್ನೇ ಸತ್ಯ ಮಾಡಲು ಹೋಗಿ ಕಾಲಗರ್ಭದಲ್ಲಿ ಮಾಯವಾಗಿವೆ ಎಂದು ಲೇವಡಿ ಮಾಡಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









