ಬೆಳ್ತಂಗಡಿ : ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆ-2ರ ಫಲಿತಾಂಶದಲ್ಲಿ ಬೆಳ್ತಂಗಡಿ ತಾಲೂಕು ಅಭೂತಪೂರ್ವ ಸಾಧನೆ ಮಾಡಿದೆ. ಇಡೀ ರಾಜ್ಯದಲ್ಲೇ ಪರೀಕ್ಷೆ-2ರಲ್ಲಿ 625ಕ್ಕೆ 625 ಅಂಕಗಳನ್ನು ಬಾಚಿಕೊಂಡ ಐವರು ಸಾಧಕರಲ್ಲಿ ಮೂವರು ವಿದ್ಯಾರ್ಥಿನಿಯರು ಇದೇ ತಾಲೂಕಿನವರಾಗಿದ್ದಾರೆ. ಈ ಮೂಲಕ ಬೆಳ್ತಂಗಡಿಯ ಕೀರ್ತಿಪತಾಕೆ ರಾಜ್ಯಮಟ್ಟದಲ್ಲಿ ಮತ್ತೊಮ್ಮೆ ಹಾರಾಡುವಂತಾಗಿದೆ.
ಈ ಐತಿಹಾಸಿಕ ಸಾಧನೆ ಮಾಡಿದ ಪ್ರತಿಭಾವಂತರೆಂದರೆ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅನನ್ಯಾ, ಧರ್ಮಸ್ಥಳದ ಎಸ್ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಮಾಧುರ್ಯ ಜಿ. ಹಾಗೂ ಬೆಳ್ತಂಗಡಿಯ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಪ್ತಿ ಗೌಡ. ಈ ಮೂವರು ವಿದ್ಯಾರ್ಥಿನಿಯರು ಗರಿಷ್ಠ ಅಂಕಗಳನ್ನು ಗಳಿಸುವ ಮೂಲಕ ಜಂಟಿಯಾಗಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಅಲಂಕರಿಸಿದ್ದಾರೆ.
ವಿಶೇಷವೆಂದರೆ, ಮೊದಲ ಎಸೆಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಯಾವುದೇ ವಿದ್ಯಾರ್ಥಿಗೂ ಪೂರ್ಣ ಅಂಕಗಳು ಲಭಿಸಿರಲಿಲ್ಲ. ಅಲ್ಲದೆ ಈ ಮೂವರಿಗೂ ಪ್ರಥಮ ಪರೀಕ್ಷೆಯಲ್ಲಿ ತಮ್ಮ ನಿರೀಕ್ಷೆಗೆ ತಕ್ಕ ಫಲಿತಾಂಶ ಸಿಕ್ಕಿರಲಿಲ್ಲ. ಆದರೂ ದೃತಿಗೆಡದೆ ಸವಾಲಾಗಿ ಸ್ವೀಕರಿಸಿದ ಇವರು, ಎರಡನೇ ಪರೀಕ್ಷೆಯಲ್ಲಿ ಕಠಿಣ ಪರಿಶ್ರಮದೊಂದಿಗೆ ಮರುಪ್ರಯತ್ನ ನಡೆಸಿ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ. ಈ ಅಪ್ರತಿಮ ಯಶೋಗಾಥೆ ಇಡೀ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









