ಬಂಟ್ವಾಳ : ಸುಬ್ರಹ್ಮಣ್ಯದಿಂದ ಮಂಗಳೂರು ಕಡೆಗೆ ಹೊರಟಿದ್ದ ಪ್ಯಾಸೆಂಜರ್ ರೈಲಿನಲ್ಲಿ ಸಹಪ್ರಯಾಣಿಕರೊಬ್ಬರ ಮೇಲೆ ಭೀಕರ ಹಲ್ಲೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಮೂವರು ಪುಂಡರನ್ನು ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆಯ (RPF) ಜಾಗರೂಕ ಸಿಬ್ಬಂದಿ ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ. ಕೋಡಿಂಬಾಳ ನಿಲ್ದಾಣದಿಂದ ಸುಬ್ರಹ್ಮಣ್ಯ-ಮಂಗಳೂರು ರೈಲು (ಸಂಖ್ಯೆ: 56626) ಹತ್ತಿದ್ದ ಈ ಮೂವರು ಕಿಡಿಗೇಡಿಗಳು, ರೈಲಿನ ಕೊನೆಯ ಬೋಗಿಯಲ್ಲಿ ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ವ್ಯಕ್ತಿಯೊಬ್ಬರ ಜೊತೆ ವಾಗ್ವಾದಕ್ಕಿಳಿದು ಬಳಿಕ ಮೈಮೇಲೆ ಕೈಮಾಡಿದ್ದಾರೆ. ಬೋಗಿಯಲ್ಲಿದ್ದ ಇತರೆ ಪ್ರಯಾಣಿಕರು ಗಲಾಟೆಯಿಂದ ಆತಂಕಗೊಂಡು ತಕ್ಷಣವೇ ರೈಲ್ವೆ ನಿಯಂತ್ರಣ ಕೊಠಡಿಗೆ ತುರ್ತು ಮಾಹಿತಿ ರವಾನಿಸಿದ್ದಾರೆ.
ಪ್ರಯಾಣಿಕರಿಂದ ದೂರು ಬಂದ ತಕ್ಷಣವೇ ಕಾರ್ಯಪ್ರವೃತ್ತರಾದ ಆರ್ಪಿಎಫ್ ಭದ್ರತಾ ಸಿಬ್ಬಂದಿ, ರೈಲು ಬಂಟ್ವಾಳ ನಿಲ್ದಾಣವನ್ನು ತಲುಪುತ್ತಿದ್ದಂತೆ ಜಾಗರೂಕರಾಗಿ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ಸಲುವಾಗಿ ರೈಲನ್ನು ನಿಲ್ದಾಣದಲ್ಲೇ ಕೆಲ ಕಾಲ ತಡೆದು ನಿಲ್ಲಿಸಲಾಗಿತ್ತು. ತಕ್ಷಣವೇ ಬೋಗಿಯೊಳಗೆ ನುಗ್ಗಿದ ರಕ್ಷಣಾ ಪಡೆಯು, ಸಹಪ್ರಯಾಣಿಕರೊಂದಿಗೆ ಜಗಳವಾಡಿ ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದ ಮೂವರನ್ನು ಜರಬಜಾಯಿಸಿ ರೈಲಿನಿಂದ ಕೆಳಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದೆ.
ಉದ್ದಟತನ ಪ್ರದರ್ಶಿಸಿದ ಮೂವರು ಆರೋಪಿಗಳನ್ನು ರೈಲ್ವೆ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ನಿಲ್ದಾಣದಲ್ಲಿ ಇಳಿಸಿಕೊಂಡ ನಂತರ, ಪ್ಯಾಸೆಂಜರ್ ರೈಲು ತನ್ನ ಎಂದಿನ ನಿಗದಿತ ಹಳಿಯಲ್ಲಿ ಮಂಗಳೂರಿನತ್ತ ಪ್ರಯಾಣ ಮುಂದುವರಿಸಿದೆ. ಸದ್ಯ ರೈಲು ನಿಲ್ದಾಣದಲ್ಲೇ ಬಂಧನದಲ್ಲಿರುವ ಮೂವರನ್ನು ಆರ್ಪಿಎಫ್ ಪೊಲೀಸರು ವಶದಲ್ಲಿಟ್ಟುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









