ಬೆಳ್ತಂಗಡಿ : ಧರ್ಮಸ್ಥಳದ ಅಶೋಕನಗರದಲ್ಲಿ ನಂಬಲಸಾಧ್ಯವಾದ ಅಪರೂಪದ ಘಟನೆಯೊಂದು ನಡೆದಿದೆ. 2000ನೇ ಇಸವಿಯಲ್ಲಿ, ಅಂದರೆ ತನ್ನ 19ನೇ ವಯಸ್ಸಿನಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡವೊಂದನ್ನು ಹಿಂಬಾಲಿಸಿ ಮಹಾರಾಷ್ಟ್ರಕ್ಕೆ ತೆರಳಿದ್ದ ಸತೀಶ್ ಎಂಬ ಯುವಕ, ಕಾಲಾನಂತರದಲ್ಲಿ ತನ್ನ ಹೆತ್ತವರು ಹಾಗೂ ಹುಟ್ಟೂರನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದ. ಆದರೆ, ಇತ್ತೀಚೆಗೆ ಮಹಾರಾಷ್ಟ್ರದ ಗೆಳೆಯರೊಂದಿಗೆ ಧರ್ಮಸ್ಥಳ ಕ್ಷೇತ್ರಕ್ಕೆ ಪ್ರವಾಸ ಬಂದಿದ್ದಾಗ ಆತನಿಗೆ ಹಳೆಯ ನೆನಪುಗಳು ಮರುಕಳಿಸಿವೆ. ಹಿಂದೆ ಸರ್ಕಸ್ ನಡೆದಿದ್ದ ಜಾಗಕ್ಕೆ ಭೇಟಿ ನೀಡಿದಾಗ ಇದು ತನ್ನದೇ ಊರು ಎಂಬುದು ಆತನಿಗೆ ಖಾತ್ರಿಯಾಗಿದೆ. ತಕ್ಷಣವೇ ತನಗೆ ನೆನಪಿದ್ದ ಸಹೋದರರ ಹೆಸರುಗಳನ್ನು ಪ್ರಸ್ತಾಪಿಸಿ, ಸ್ಥಳೀಯ ಅಂಗಡಿಯವರು ಹಾಗೂ ಸಾರ್ವಜನಿಕರ ಸಹಾಯದಿಂದ ಕೊನೆಗೂ ತನ್ನ ಸ್ವಗೃಹವನ್ನು ಪತ್ತೆಹಚ್ಚಿ ಕುಟುಂಬಸ್ಥರನ್ನು ತಬ್ಬಿಕೊಂಡಿದ್ದಾನೆ.
ಮಗ ಕಾಣೆಯಾದ ದಿನದಿಂದಲೂ ಧರ್ಮಸ್ಥಳ ಮಂಜುನಾಥ ಸ್ವಾಮಿ, ಕಟೀಲು ದುರ್ಗಾಪರಮೇಶ್ವರಿ ಹಾಗೂ ಪಣೋಲಿಬೈಲ್ ದೈವಸ್ಥಾನಕ್ಕೆ ನಿರಂತರವಾಗಿ ಹರಕೆ ಹೊರುತ್ತಿದ್ದ ತಾಯಿಯ ಪ್ರಾರ್ಥನೆ ಕೊನೆಗೂ ಮರುಜನ್ಮ ಪಡೆದಂತೆ ಫಲಿಸಿದೆ. “ನಾನು ಕಣ್ಣು ಮುಚ್ಚುವ ಮುನ್ನ ನನ್ನ ಮಗನನ್ನು ಒಮ್ಮೆ ನೋಡಬೇಕು, ಆತನನ್ನು ಹುಡುಕಿ ತನ್ನಿ” ಎಂದು ಇತ್ತೀಚೆಗಷ್ಟೇ ತನ್ನ ಉಳಿದಿಬ್ಬರು ಮಕ್ಕಳ ಮುಂದೆ ಕಣ್ಣೀರಿಟ್ಟಿದ್ದ ಆ ತಾಯಿಯ ಮಡಿಲು ಈಗ ತುಂಬಿದೆ. ಆದರೆ, 26 ವರ್ಷಗಳ ಹಿಂದೆ ಸತೀಶ್ ಆಗಿ ಮನೆ ಬಿಟ್ಟಿದ್ದ ಈತ ಮರಳಿ ಬಂದಾಗ ‘ಸಲೀಂ ಅಬ್ದುಲ್ ಅನ್ಸಾರಿ’ಯಾಗಿ ಬದಲಾಗಿದ್ದಾನೆ. ಮಹಾರಾಷ್ಟ್ರದಲ್ಲಿದ್ದಾಗ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತಾಲೀಮಾ ಎಂಬಾಕೆಯನ್ನು ವರಿಸಿರುವ ಈತನಿಗೆ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿದ್ದಾರೆ. ಸುದೀರ್ಘ ಅವಧಿಯ ಪರಭಾಷಾ ವಾಸದಿಂದಾಗಿ ತನ್ನ ಮಾತೃಭಾಷೆಯಾದ ಕನ್ನಡ ಮತ್ತು ತುಳುವನ್ನು ಸಂಪೂರ್ಣವಾಗಿ ಮರೆತಿರುವ ಸಲೀಂ, ಪ್ರಸ್ತುತ ಕೇವಲ ಹಿಂದಿ ಭಾಷೆಯಲ್ಲಷ್ಟೇ ಮಾತನಾಡುತ್ತಿದ್ದಾನೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









