ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಪ್ರಮುಖ ರಸ್ತೆಗಳ ಸುಧಾರಣೆಗಾಗಿ ಕೇಂದ್ರ ಸರ್ಕಾರವು ಭಾರಿ ಮೊತ್ತದ ಧನಸಹಾಯವನ್ನು ಘೋಷಿಸಿದೆ. ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿಯ (CRIF) ಅಡಿಯಲ್ಲಿ ಒಟ್ಟು 6.00 ಕೋಟಿ ರೂಪಾಯಿಗಳ ವಿಶೇಷ ಅನುದಾನ ಮಂಜೂರಾಗಿದ್ದು, ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಆಡಳಿತಾತ್ಮಕ ಒಪ್ಪಿಗೆಯೂ ಲಭ್ಯವಾಗಿದೆ ಎಂದು ಶಾಸಕರ ವಿಕಾಸ ಜನಸೇವಾ ಕಛೇರಿಯ ಪ್ರಕಟಣೆ ತಿಳಿಸಿದೆ.
ಈ ಯೋಜನೆಯಡಿ ಕ್ಷೇತ್ರದ ಸಾರ್ವಜನಿಕರು ದೀರ್ಘಕಾಲದಿಂದ ಕಾಯುತ್ತಿದ್ದ ಒಟ್ಟು ಆರು ಪ್ರಮುಖ ರಸ್ತೆಗಳನ್ನು ಸಂಪೂರ್ಣವಾಗಿ ನವೀಕರಿಸಲಾಗುವುದು. ಹೆಬ್ರಿ ತಾಲೂಕಿನ ಬಚ್ಚಪ್ಪುವಿನಿಂದ ಹೆಬ್ರಿ ಕಡೆಗೆ ಸಂಪರ್ಕಿಸುವ ರಸ್ತೆ, ಮುಂಡ್ಕೂರು ಪೇಟೆಯ ರಸ್ತೆ, ನಿಟ್ಟೆ ಕೆಮ್ಮಣ್ಣು ಬಪ್ಪಗೋಳಿ ದ್ವಾರದಿಂದ ಕೆಮ್ಮಣ್ಣು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆ, ಅಜೆಕಾರು-ಹೆರ್ಮುಂಡೆ ಚರ್ಚ್ ಸಮೀಪದ ರಸ್ತೆ, ಕಾರ್ಕಳ ನಾರಾವಿ ಮುಖ್ಯ ರಸ್ತೆಯಿಂದ ಕವಲೊಡೆಯುವ ಈದು ಕ್ರಾಸ್ ರಸ್ತೆ ಹಾಗೂ ಪಡುಕುಡೂರು ಶಾಲೆಯಿಂದ ಶಿವಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಈ ಅಭಿವೃದ್ಧಿ ಪಟ್ಟಿಯಲ್ಲಿವೆ. ಗುರುತಿಸಲಾದ ಈ ಪ್ರತಿಯೊಂದು ರಸ್ತೆಯ ಕಾಮಗಾರಿಗೆ ತಲಾ 1.00 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
ಸ್ಥಳೀಯ ನಿವಾಸಿಗಳ ಮತ್ತು ವಾಹನ ಸವಾರರ ಸುರಕ್ಷಿತ ಹಾಗೂ ಸುಗಮ ಸಂಚಾರವನ್ನು ಮನಗಂಡು, ಈ ವಿಶೇಷ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಹಾಗೂ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕ ವಿಶೇಷ ಮನವಿ ಸಲ್ಲಿಸಲಾಗಿತ್ತು. ಶಾಸಕ ವಿ. ಸುನಿಲ್ ಕುಮಾರ್ ಅವರ ಈ ನಿರಂತರ ಪ್ರಯತ್ನದ ಫಲವಾಗಿ ಅನುದಾನ ಮಂಜೂರಾಗಿದ್ದು, ಇಲಾಖೆಯ ತಾಂತ್ರಿಕ ಪ್ರಕ್ರಿಯೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ಭರವಸೆ ನೀಡಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









