ಕಡಬ : ಸುಬ್ರಹ್ಮಣ್ಯದ ಕುಲ್ಕುಂದ-ಬಿಲ್ಲೆ ರಸ್ತೆಯ ಡಿಪ್ಪೋ ಎಂಬಲ್ಲಿ ಜೂನ್ 13ರ ಮುಂಜಾನೆ ಸಂಭವಿಸಿದ ಪಿಕಪ್ ವಾಹನ ಅಪಘಾತವೊಂದು ಅಕ್ರಮ ಗೋ ಸಾಗಾಟ ಜಾಲವನ್ನು ಬಯಲಿಗೆಳೆದಿದೆ. ನಿಯಂತ್ರಣ ತಪ್ಪಿ ವಾಹನ ಬಿದ್ದಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಉಪ-ನಿರೀಕ್ಷಕರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಸ್ಥಳದಲ್ಲಿದ್ದ ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿಗಳಾದ ಚಾಲಕ ಚಂದ್ರು (ಚಂದ್ರಶೇಖರ) ಮತ್ತು ಕ್ಲೀನರ್ ಮೋಹನ ಎಂಬುವವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಅಕ್ರಮವಾಗಿ ಜಾನುವಾರುಗಳನ್ನು ಕೊಂಡೊಯ್ಯುತ್ತಿದ್ದ ಸತ್ಯಾಂಶ ಬೆಳಕಿಗೆ ಬಂದಿದೆ.
ಯಾವುದೇ ಕಾನೂನಾತ್ಮಕ ದಾಖಲೆ ಹಾಗೂ ಪರವಾನಗಿ ಇಲ್ಲದೆ, ಕೇವಲ ಮಾಂಸ ಮಾರಾಟದ ಉದ್ದೇಶಕ್ಕಾಗಿ ಎರಡು ಜಾನುವಾರುಗಳನ್ನು ಅತ್ಯಂತ ಹಿಂಸಾತ್ಮಕವಾಗಿ ಈ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಮುಂಜಾನೆ ವೇಳೆ ವಾಹನವು ಆಯತಪ್ಪಿ ರಸ್ತೆಗೆ ಉರುಳಿದ ತಕ್ಷಣ, ಸಿಕ್ಕಿಬೀಳುವ ಭಯದಿಂದ ಆರೋಪಿಗಳು ಜಾನುವಾರುಗಳ ಹಗ್ಗವನ್ನು ಬಿಚ್ಚಿ ಅವುಗಳನ್ನು ವಾಹನದಿಂದ ಇಳಿಸಿ ಓಡಿಸಿದ್ದರು ಎಂಬುದು ಪೊಲೀಸ್ ತನಿಖೆಯ ವೇಳೆ ದೃಢಪಟ್ಟಿದೆ.
ಬಳಿಕ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು, ಅಪಘಾತ ನಡೆದ ಸ್ಥಳದ ಕೆಲವೇ ದೂರದಲ್ಲಿ ಓಡಾಡುತ್ತಿದ್ದ ಆ ಎರಡೂ ಜಾನುವಾರುಗಳನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಪಿಕಪ್ ವಾಹನ ಹಾಗೂ ಗೋವುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳ ವಿರುದ್ಧ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 21/2025 ರಂತೆ ಕರ್ನಾಟಕ ಗೋವುಗಳ ಸಂರಕ್ಷಣಾ ಮತ್ತು ಜಾನುವಾರು ಪ್ರತಿಬಂಧಕ ಕಾಯ್ದೆ, ಪ್ರಾಣಿ ಹಿಂಸೆ ತಡೆ ಕಾಯ್ದೆ ಹಾಗೂ ಮೋಟಾರು ವಾಹನ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









