ಬಂಟ್ವಾಳ : ಬಡಗಬೆಳ್ಳೂರು ಗ್ರಾಮದ ಭಟ್ಟಾಜೆ ಎಂಬಲ್ಲಿನ ಪ್ರಮುಖ ತಾರಬಳಿ ಸಂಪರ್ಕ ಸೇತುವೆಯು ಮುಂಗಾರು ಮಳೆಯ ಆರಂಭದ ದಿನಗಳಲ್ಲೇ ಧರಾಶಾಹಿಯಾಗಿದೆ. ಇದರ ಪರಿಣಾಮವಾಗಿ ಸುತ್ತಮುತ್ತಲಿನ ಹಲವು ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ನೂರಾರು ಜನವಸತಿ ಪ್ರದೇಶಗಳು ದ್ವೀಪದಂತಾಗಿ ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ.
ಈ ಭಾಗದ ಕಿರಲೆ, ಭಟ್ಟಾಜೆ, ಸೊರ್ನಾಡು, ಎರ್ಮಲಪದವು, ಕುರಿಯಾಳ, ಬಾಳಿಕೆ, ಬಂಡಸಾಲೆ ಹಾಗೂ ಕೊಳತ್ತಮಜಲು, ಬಡಗಬೆಳ್ಳೂರು ಮತ್ತು ಪೊಳಲಿ ಪರಿಸರದ ನಾಗರಿಕರಿಗೆ ದೈನಂದಿನ ಓಡಾಟಕ್ಕೆ ಇದೊಂದೇ ಪ್ರಮುಖ ಆಧಾರವಾಗಿತ್ತು. ಕಳೆದ ಕೆಲವು ತಿಂಗಳಿನಿಂದಲೇ ಈ ಸೇತುವೆ ಶಿಥಿಲಗೊಂಡು ಅಪಾಯದ ಅಂಚಿನಲ್ಲಿದ್ದ ಕಾರಣ ದೊಡ್ಡ ವಾಹನಗಳ ಓಡಾಟವನ್ನು ನಿರ್ಬಂಧಿಸಿ, ಕೇವಲ ಲಘು ವಾಹನಗಳಿಗಷ್ಟೇ ಓಡಾಡಲು ಬಿಡಲಾಗಿತ್ತು. ಪ್ರಸ್ತುತ ಸ್ಥಳೀಯರ ತೀವ್ರ ಒತ್ತಾಯದ ಮೇರೆಗೆ ಸಂಬಂಧಪಟ್ಟ ಇಲಾಖೆಯು ಜೆಸಿಬಿ ಯಂತ್ರಗಳ ಮೂಲಕ ಹಳೆಯ ಸೇತುವೆಯನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದೆ. ಆದರೆ ಅದರ ತಳಪಾಯವನ್ನು ಸಂಪೂರ್ಣವಾಗಿ ತೆಗೆದು ಮುಗಿಸಲು ಇನ್ನೂ ಕೆಲವು ವಾರಗಳ ಕಾಲಾವಕಾಶ ಬೇಕಾಗಬಹುದು ಎಂದು ತಿಳಿದುಬಂದಿದೆ.
ಸೇತುವೆ ಇಲ್ಲದ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನಿತ್ಯ ಉದ್ಯೋಗಕ್ಕೆ ಹೋಗುವವರು ತುಂಬಿ ಹರಿಯುವ ತೋಡನ್ನು ದಾಟಿಯೇ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲದಿದ್ದರೆ ಹತ್ತಾರು ಕಿಲೋಮೀಟರ್ ಸುತ್ತುಬಳಸಿ ಸಂಚರಿಸಬೇಕಾದ ದುಸ್ಥಿತಿ ಒದಗಿಬಂದಿದೆ. ಮಳೆ ಜೋರಾಗಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವ ಭೀತಿ ಎದುರಾಗಿದೆ. ಹೊಸ ಸೇತುವೆ ಮಂಜೂರಾಗಿ ಅದು ಕಣ್ಮುಂದೆ ಸಾಕಾರಗೊಳ್ಳಲು ಇಲಾಖೆ ಎಷ್ಟು ವರ್ಷ ತಗೆದುಕೊಳ್ಳುತ್ತದೋ ಎಂಬ ಆತಂಕ ಹಾಗೂ ಅಸಹಾಯಕತೆಯಲ್ಲಿ ಸ್ಥಳೀಯ ಹಳ್ಳಿಗರು ದಿನದೂಡುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









