ಮಂಗಳೂರು : ಮಂಗಳೂರಿನ ನೇತ್ರಾವತಿ ನದಿ ತೀರದ ಪ್ರಶಾಂತ ಪರಿಸರದಲ್ಲಿರುವ ಜಪ್ಪಿನಮೊಗರು ಕಡೆಕಾರಿನ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಪುನರ್ನಿರ್ಮಾಣ ಕಾರ್ಯಕ್ಕೆ ಬುಧವಾರ ಸಾಂಪ್ರದಾಯಿಕ ಚಾಲನೆ ಸಿಕ್ಕಿದೆ. ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರ ಪವಿತ್ರ ವೈದಿಕ ಮಾರ್ಗದರ್ಶನದಲ್ಲಿ ಕ್ಷೇತ್ರದ ಭವ್ಯ ಶಿಲಾನ್ಯಾಸ ಕಾರ್ಯಕ್ರಮವು ಅತ್ಯಂತ ಭಕ್ತಿಭಾವದಿಂದ ನೆರವೇರಿತು. ಸುಮಾರು 680 ವರ್ಷಗಳ ಸುದೀರ್ಘ ಇತಿಹಾಸವಿರುವ, ಶ್ರೀ ಗುರು ಶಾಂತಯ್ಯ ಸ್ವಾಮಿಯವರಿಂದ ಪ್ರತಿಷ್ಠಾಪಿಸಲ್ಪಟ್ಟ ಈ ಪುಣ್ಯಕ್ಷೇತ್ರವನ್ನು ಪ್ರಸ್ತುತ ನೆಲಮಟ್ಟದಿಂದ ಐದು ಅಡಿ ಎತ್ತರಿಸಿ ಭವ್ಯವಾಗಿ ಮರುನಿರ್ಮಾಣ ಮಾಡಲು ಸಂಕಲ್ಪಿಸಲಾಗಿದೆ.
ಈ ಶುಭ ಸಂದರ್ಭದಲ್ಲಿ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಹಿಂದೆ ಕಷ್ಟಗಳ ಸುಳಿಯಲ್ಲಿದ್ದ ಕಡೆಕಾರು ಪ್ರದೇಶವು ಇಂದು ಮಲ್ಲಿಕಾರ್ಜುನ ದೇವರ ಕೃಪೆಯಿಂದ ಅತ್ಯಂತ ಸಮೃದ್ಧವಾಗಿ ಬೆಳೆದಿದೆ ಎಂದು ನೆನಪಿಸಿಕೊಂಡರು. ಇಂತಹ ದೇವಸ್ಥಾನದ ಪುನರ್ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ನಮ್ಮೆಲ್ಲರ ಸೌಭಾಗ್ಯವಾಗಿದ್ದು, ನಾವಿಲ್ಲಿ ಇತಿಹಾಸ ನಿರ್ಮಿಸುವ ಸತ್ಕಾರ್ಯ ಮಾಡಬೇಕಿದೆ ಎಂದರು. ಅಲ್ಲದೆ, ಮಾಣಿಲ ಕ್ಷೇತ್ರದ ವತಿಯಿಂದ ಈ ಧಾರ್ಮಿಕ ಕೈಂಕರ್ಯಕ್ಕೆ ಒಂದು ಲಕ್ಷ ರೂಪಾಯಿಗಳ ಧನಸಹಾಯ ಹಾಗೂ ಅಗತ್ಯವಿದ್ದಲ್ಲಿ ಕರಸೇವೆಗೆ ಸ್ವಯಂಸೇವಕರನ್ನು ಕಳುಹಿಸಿಕೊಡುವುದಾಗಿ ಸ್ವಾಮೀಜಿ ಪ್ರಕಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಹಾಗೂ ಮಾಜಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಮಾತನಾಡಿ, ಕೇವಲ ಹತ್ತು ತಿಂಗಳ ನಿಗದಿತ ಅವಧಿಯಲ್ಲಿ ದೇವಸ್ಥಾನದ ಪುನರ್ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ, ಮುಂಬರುವ ಏಪ್ರಿಲ್ ತಿಂಗಳಿನಲ್ಲಿ ವೈಭವದ ಬ್ರಹ್ಮಕಲಶೋತ್ಸವವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಹರಿಪ್ರಸಾದ್ ಜೆ. ಅವರು ಕ್ಷೇತ್ರದ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿದರು. ಸಮಾರಂಭದಲ್ಲಿ ಮಾಜಿ ಕಾರ್ಪೊರೇಟರ್ ವೀಣಾಮಂಗಳ, ಕ್ಷೇತ್ರದ ಆಡಳಿತ ಮೋಕ್ತೆಸರರಾದ ಶಿವಾನಂದ ರಾವ್, ಜಗದೀಶ್ ರಾವ್, ಕೊರಗಪ್ಪ, ಸಮಿತಿ ಅಧ್ಯಕ್ಷ ರಾಧಾಕೃಷ್ಣ, ಟ್ರಸ್ಟಿಗಳಾದ ನವೀನ್ಚಂದ್ರ, ಸುಧೀರ್, ಸಂತೋಷ್, ಪ್ರದೀಪ್ ಪಾಲೆಮಾರ್ ಹಾಗೂ ಪ್ರಸನ್ನ ಪಾಲೆಮಾರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಯೋಗೀಶ್ ಶೆಟ್ಟಿ ಜೆಪ್ಪು ಕಾರ್ಯಕ್ರಮ ನಿರೂಪಿಸಿದರೆ, ಉಪಾಧ್ಯಕ್ಷ ಜೆ.ಕೆ.ರಾವ್ ಧನ್ಯವಾದ ಸಮರ್ಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









