ಬೆಳ್ತಂಗಡಿ : ರೆಂಕೆದಗುತ್ತುವಿನಲ್ಲಿರುವ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಆವರಣದಲ್ಲಿ ಜೂನ್ 16, 2026ರಂದು ವಿಶೇಷ ಸಂಭ್ರಮ ಮನೆಮಾಡಿತ್ತು. ಸಂಸ್ಥೆಯು ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ತನ್ನ ಉದ್ಯೋಗಿಗಳ ಮಾಸಿಕ ಜನ್ಮದಿನೋತ್ಸವ ಹಾಗೂ ನೂತನ ಸಿಬ್ಬಂದಿಗಳನ್ನು ಬರಮಾಡಿಕೊಳ್ಳುವ ಸೌಹಾರ್ದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಇದೇ ವೇದಿಕೆಯಲ್ಲಿ ಸಿರಿ ಸಂಸ್ಥೆಯ ಸರ್ವಾಂಗೀಣ ಏಳಿಗೆಗೆ ನಿರಂತರವಾಗಿ ಶ್ರಮಿಸುತ್ತಾ ಬಂದಿರುವ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಮತ್ತು ಅವರ ಧರ್ಮಪತ್ನಿ ಅರುಣಾ ವಿ. ಶೆಟ್ಟಿ ದಂಪತಿಗಳನ್ನು ಸಂಸ್ಥೆಯ ಪರವಾಗಿ ಅತ್ಯಂತ ಪ್ರೀತಿಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎ.ವಿ. ಶೆಟ್ಟಿಯವರು ಹುಟ್ಟುಹಬ್ಬ ಆಚರಿಸಿಕೊಂಡ ಸಿಬ್ಬಂದಿಗಳಿಗೆ ಮನಃಪೂರ್ವಕವಾಗಿ ಶುಭ ಹಾರೈಸಿ ಪ್ರೇರಣಾತ್ಮಕ ನುಡಿಗಳನ್ನಾಡಿದರು. ಪೂಜ್ಯ ಹೆಗ್ಗಡೆಯವರು ಹಾಗೂ ಮಾತೋಶ್ರೀ ಹೇಮಾವತಿ ಅಮ್ಮನವರು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲೀಕರಣದ ಉದಾತ್ತ ಧ್ಯೇಯದೊಂದಿಗೆ ಕಟ್ಟಿದ ಈ ‘ಸಿರಿ’ ಬ್ರ್ಯಾಂಡ್ ಅನ್ನು ನಾವೆಲ್ಲರೂ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕಿದೆ ಎಂದರು. ಪ್ರತಿಯೊಬ್ಬ ಉದ್ಯೋಗಿಯೂ ಅತ್ಯಂತ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸುವ ಮೂಲಕ ಪೂಜ್ಯ ದಂಪತಿಗಳ ಕನಸನ್ನು ಸಾಕಾರಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ಧನ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳೊಂದಿಗೆ ಎ.ವಿ. ಶೆಟ್ಟಿ ದಂಪತಿಗಳ ಕೊಡುಗೆಯನ್ನು ಸ್ಮರಿಸಿದರು. ವಿಶೇಷ ಆಹ್ವಾನಿತರಾಗಿದ್ದ ಉಜಿರೆಯ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ಧನ ಅವರು ಕಾರ್ಯಕ್ರಮವನ್ನು ಶ್ಲಾಘಿಸಿ ಸಿಬ್ಬಂದಿಗಳಿಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಪೂಜ್ಯ ಖಾವಂದರು ಲೋಕಕಲ್ಯಾಣಕ್ಕಾಗಿ ನಡೆಸುತ್ತಿರುವ ಸಮಾಜಮುಖಿ ಕಾರ್ಯಗಳ ಕುರಿತಾದ ವಿಶೇಷ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಸಿರಿ ಕ್ಲಬ್ ಅಧ್ಯಕ್ಷೆ ಉಷಾ, ಎಸ್.ಡಿ.ಎಂ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಿರಿ ಸಂಸ್ಥೆಯ ನೌಕರರು ಉಪಸ್ಥಿತರಿದ್ದ ಈ ಸಮಾರಂಭವನ್ನು ಜೀವನ್ ಕುಮಾರ್ ನಿರೂಪಿಸಿದರೆ, ಮುಖ್ಯ ನಿರ್ವಹಣಾಧಿಕಾರಿ ಪ್ರಸನ್ನ ವಂದಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









