ಮಂಗಳೂರು : ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್ಐಆರ್ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು, ಎಸ್ಐಆರ್ ಪ್ರಕ್ರಿಯೆಯ ಮೂಲಕ ಬಿಜೆಪಿ ಮತ್ತು ಆರ್ಎಸ್ಎಸ್ ದೇಶದ ನೈಜ ಮತದಾರರನ್ನು ಪಟ್ಟಿಯಿಂದ ಕೈಬಿಡಲು ವ್ಯವಸ್ಥಿತ ಸಂಚು ರೂಪಿಸುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದರು. ಈ ಹಿಂದೆ ಪ್ರತಿ ವರ್ಷದ ಜನವರಿಯಲ್ಲಿ ನಿಯಮಿತವಾಗಿ ನಡೆಯುತ್ತಿದ್ದ ಮತದಾರರ ಪಟ್ಟಿ ಪರಿಷ್ಕರಣೆಯು ಕೊನೆಯದಾಗಿ 2013 ರಲ್ಲಿ ನಡೆದಿತ್ತು ಎಂಬುದನ್ನು ನೆನಪಿಸಿದ ಅವರು, ಸ್ವಾತಂತ್ರ್ಯಕ್ಕೂ ಮುನ್ನ ಯಾರಿಗೂ ಮತದಾನದ ಹಕ್ಕಿರಲಿಲ್ಲ. ರಾಜಪ್ರಭುತ್ವವನ್ನು ಕೊನೆಗಾಣಿಸಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್ ಪಕ್ಷ. ಆದರೆ ಇಂದು ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ಕಡಿತಗೊಳಿಸಿ, ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಆರ್ಎಸ್ಎಸ್ ಮತ್ತು ಬಿಜೆಪಿ ಜಂಟಿಯಾಗಿ ಯತ್ನಿಸುತ್ತಿವೆ ಎಂದು ಕಿಡಿಕಾರಿದರು.
ದೇಶವನ್ನು ಕಟ್ಟಿ ಬೆಳೆಸಿದ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ ಎಂದ ಅವರು, ಪ್ರಸ್ತುತ ದೇಶವು ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ಕವಲುದಾರಿಯಲ್ಲಿ ಬಂದು ನಿಂತಿದೆ. ಇಂತಹ ಹೊತ್ತಿನಲ್ಲಿ ಬಿಜೆಪಿಯ ಈ ಜಾಣ್ಮೆಯ ಷಡ್ಯಂತ್ರದ ವಿರುದ್ಧ ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲೇ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದು ಕರೆ ನೀಡಿದರು. ತಾವು ಪಶ್ಚಿಮ ಬಂಗಾಳ ಚುನಾವಣೆಯ ಉಸ್ತುವಾರಿ ವಹಿಸಿದ್ದ ಸಂದರ್ಭದಲ್ಲಿ ಸುಮಾರು 27 ಲಕ್ಷ ಮತದಾರರನ್ನು ಸಂಶಯಾಸ್ಪದ ಎಂದು ಪರಿಗಣಿಸಿ ಅವರಿಗೆ ಮತದಾನದ ಹಕ್ಕನ್ನೇ ನಿರಾಕರಿಸಲಾಗಿದ್ದ ಉದಾಹರಣೆಯನ್ನು ಹಂಚಿಕೊಂಡ ಹರಪ್ರಸಾದ್, ಬಿಜೆಪಿಗೆ ದೇಶದ ಸಂವಿಧಾನವಾಗಲಿ ಅಥವಾ ತ್ರಿವರ್ಣ ಧ್ವಜದ ಮೇಲಾಗಲಿ ಯಾವುದೇ ಗೌರವ ಮತ್ತು ನಂಬಿಕೆ ಇಲ್ಲ ಎಂದು ಟೀಕಿಸಿದರು.
ದೇಶದಲ್ಲಿ ನಕಲಿ ಪ್ರಮಾಣಪತ್ರ ಹೊಂದಿರುವ ವ್ಯಕ್ತಿ ಪ್ರಧಾನಿ ಹುದ್ದೆಗೆ ಏರಬಹುದಾದರೆ, ಎಲ್ಲಾ ನೈಜ ದಾಖಲೆಗಳನ್ನು ಹೊಂದಿರುವ ಸಾಮಾನ್ಯ ಪ್ರಜೆ ಮತದಾನ ಮಾಡಬಾರದೇ ಎಂದು ಅವರು ಪ್ರಶ್ನಿಸಿದರು. ಎಸ್ಐಆರ್ ಪ್ರಕ್ರಿಯೆಯ ಮೂಲಕ ನಕಲಿ ಮತದಾರರನ್ನು ಪಟ್ಟಿಯಿಂದ ಹೊರಹಾಕುವುದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ನೆನಪಿರಲಿ, ದೇಶದಲ್ಲಿ ಅತಿ ಹೆಚ್ಚು ನಕಲಿಗಳು ಇರುವುದೇ ಬಿಜೆಪಿ ಮತ್ತು ಆರ್ಎಸ್ಎಸ್ ಪಾಳಯದಲ್ಲಿ. ಕೊನೆಯದಾಗಿ ವಿಪಕ್ಷಗಳಿಗೆ ಎಚ್ಚರಿಕೆ ನೀಡಿದ ಅವರು, ಕೆಲವರು ಕಾಂಗ್ರೆಸ್ ಪಕ್ಷವನ್ನು ಮೂರ್ಖರನ್ನಾಗಿಸಲು ಯತ್ನಿಸಬಹುದು, ಆದರೆ ಈ ದೇಶದ ಪ್ರಭುತ್ವವಾಗಿರುವ ಜನಸಾಮಾನ್ಯರನ್ನು ಮೂರ್ಖರನ್ನಾಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









