ಮಂಗಳೂರು: ಬಿಲ್ಲವ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಭರವಸೆ ನೀಡಿ ವಂಚಿಸಿರುವ ಪ್ರಸ್ತುತ ಸರ್ಕಾರದ ಧೋರಣೆಯನ್ನು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತೀವ್ರವಾಗಿ ಖಂಡಿಸಿದೆ. ಕಳೆದ ಮೂರು ವರ್ಷಗಳಿಂದ ಸರ್ಕಾರದ ಭರವಸೆಯ ಈಡೇರಿಕೆಗಾಗಿ ಕಾಯುತ್ತಾ ಕುಳಿತಿದ್ದ ವೇದಿಕೆಯು, ಇನ್ನು ಮುಂದೆಯೂ ಇದೇ ಪರಿಸ್ಥಿತಿ ಮುಂದುವರಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದೆ.
ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆಸಿದ ನಿರಂತರ ಹೋರಾಟದ ಫಲವಾಗಿ ಕೊನೆಗೂ ನಿಗಮ ಘೋಷಣೆಯಾಗಿತ್ತು ಎಂದರು. ಪ್ರಸ್ತುತ ಸರ್ಕಾರವು ನಿಗಮಕ್ಕೆ ಕಚೇರಿ ಒದಗಿಸಿ, ಅಧ್ಯಕ್ಷರನ್ನು ನೇಮಕ ಮಾಡಿದೆಯಾದರೂ, ಭರವಸೆ ನೀಡಿದ್ದ 500 ಕೋಟಿ ರೂಪಾಯಿಗಳ ಬದಲಿಗೆ ಹಿಂದಿನ ಸರ್ಕಾರ ನಿಗದಿಪಡಿಸಿದ್ದ ಕೇವಲ 10 ಕೋಟಿ ರೂಪಾಯಿಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಇದರಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು 1500 ಕೋಟಿ ರೂಪಾಯಿಗಳಷ್ಟು ಅನುದಾನ ಬಾಕಿ ಉಳಿದಿದ್ದು, ತಕ್ಷಣವೇ ಈ ಬಾಕಿ ಹಣದೊಂದಿಗೆ ಮುಂದಿನ ಅವಧಿಯ 500 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕು ಮತ್ತು ಸಮಾಜದ ಕನಿಷ್ಠ ಇಬ್ಬರು ಜನಪ್ರತಿನಿಧಿಗಳಿಗೆ ಮಂತ್ರಿಮಂಡಲದಲ್ಲಿ ಸ್ಥಾನ ನೀಡಬೇಕು, ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 26 ಉಪಪಂಗಡಗಳನ್ನು ಹೊಂದಿರುವ ಬಿಲ್ಲವ ಸಮಾಜವು 25 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ ಎಂದು ನೆನಪಿಸಿದ ಸತ್ಯಜಿತ್ ಅವರು, ಹಿಂದೆ ಸಮಾಜದಿಂದ 15 ಶಾಸಕರು, 4 ರಿಂದ 5 ಸಂಸದರು ಹಾಗೂ ಯಾವ ಸರ್ಕಾರ ಬಂದರೂ ಕನಿಷ್ಠ ಇಬ್ಬರು ಸಚಿವರು ಇರುತ್ತಿದ್ದರು, ಆದರೆ ಈಗ ಈ ಪ್ರಾತಿನಿಧ್ಯ ಗಣನೀಯವಾಗಿ ಕಡಿಮೆಯಾಗಿದೆ ಎಂದರು. ಜನಸಂಖ್ಯೆಯ ಆಧಾರದ ಮೇಲೆ ಸಮಾಜದ ಯಾರಿಗಾದರೂ ಸರಿ, ಮಂತ್ರಿಮಂಡಲದಲ್ಲಿ ಕನಿಷ್ಠ ಇಬ್ಬರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದ ಅವರು, ಇತ್ತೀಚಿನ ದಿನಗಳಲ್ಲಿ ನಡೆದ ಟ್ಯಾಬ್ಲೋ ವಿವಾದ, ಪುಸ್ತಕದ ಹೋರಾಟ ಮತ್ತು ಮಹಿಳೆಯೊಬ್ಬರು ಸಮಾಜಕ್ಕೆ ಮಾಡಿದ ಅಪಮಾನದ ವಿರುದ್ಧದ ಪ್ರತಿಭಟನೆಗಳೇ ಬಿಲ್ಲವ ಸಮಾಜ ಇಂದು ಎಷ್ಟು ಜಾಗೃತವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಅಭಿಪ್ರಾಯಪಟ್ಟರು. ಈ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಸಂದೀಪ್ ಪಂಪ್ ವೆಲ್, ಎಂ.ಕೆ.ಪ್ರಸಾದ್, ದಿನೇಶ್ ಸುವರ್ಣ ರಾಯಿ, ಲಕ್ಷ್ಮೀಶ ಸುವರ್ಣ, ನವೀನ್ ಕೋಟ್ಯಾನ್ ಹಾಗೂ ಗಣೇಶ್ ಅಮೀನ್ ಉಪಸ್ಥಿತರಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಹಿಂದುತ್ವದ ಭದ್ರಕೋಟೆಯಾಗಿ ಬೆಳೆಯಲು ಮತ್ತು ಇಲ್ಲಿ ಬಿಜೆಪಿ ನಿರಂತರವಾಗಿ ಜಯಭೇರಿ ಬಾರಿಸಲು ಕೇವಲ ಮೋದಿಯವರ ಅಲೆಗಿಂತಲೂ ಸಂಘ ಪರಿವಾರದ ತಳಮಟ್ಟದ ಚಟುವಟಿಕೆಗಳೇ ಪ್ರಮುಖ ಕಾರಣ ಎಂದು ಸತ್ಯಜಿತ್ ಸುರತ್ಕಲ್ ಇದೇ ಸಂದರ್ಭದಲ್ಲಿ ವಿಶ್ಲೇಷಿಸಿದರು. ಆದರೆ ಪ್ರಸ್ತುತ ಪ್ರಿಯಾಂಕ್ ಖರ್ಗೆ ಅವರು ಸಂಘದ ಸಿದ್ಧಾಂತವನ್ನು ಪ್ರಶ್ನಿಸುತ್ತಿದ್ದರೂ, ಸಂಘ ಪರಿವಾರದ ಹಿನ್ನೆಲೆಯಿಂದ ಬಂದು ರಾಜಕೀಯ ಲಾಭ ಪಡೆದ ಇಲ್ಲಿನ ಶಾಸಕರು ಮತ್ತು ಮುಖಂಡರು ಮೌನವಾಗಿರುವುದು ದುರದೃಷ್ಟಕರ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೆಯೂ ಸಂಘ ಪರಿವಾರದ ಸಿದ್ಧಾಂತಗಳ ಮೇಲೆ ಹಲವರು ಪ್ರಶ್ನೆ ಎತ್ತಿದ್ದರು ಮತ್ತು ಎರಡು ಬಾರಿ ನಿಷೇಧವನ್ನು ಹೇರಲಾಗಿತ್ತು, ಆದಾಗ್ಯೂ ಸಂಘವು ತನ್ನ ರಾಷ್ಟ್ರೀಯ ಕಾರ್ಯಸೂಚಿಯಂತೆಯೇ ಮುನ್ನಡೆದಿದೆ ಎಂದ ಸತ್ಯಜಿತ್, ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ ಎಂದು ಸ್ಪಷ್ಟಪಡಿಸಿದರು. ಹಿಂದೆ ಸಂಘಕ್ಕೆ ಕಂಟಕ ಬಂದಾಗ ಇಡೀ ಸಮಾಜವೇ ಒಟ್ಟಾಗಿ ಪ್ರತ್ಯುತ್ತರ ನೀಡುತ್ತಿತ್ತು, ಆದರೆ ಇಂದು ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳಿಗೆ ಸಂಘದ ಪ್ರಯೋಗ ಶಾಲೆಯ ಶಾಸಕರಿಂದಲೇ ಸರಿಯಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ದೇಶ ಮತ್ತು ಸಮಾಜದ ಹಿತದೃಷ್ಟಿಯಿಂದ ಸಂಘದ ಸಿದ್ಧಾಂತವು ಸದಾ ಅನಿವಾರ್ಯವಾಗಿದ್ದು, ಅದಕ್ಕೆ ಯಾವುದೇ ಧಕ್ಕೆ ಬಾರದಂತೆ ಸಂಘವು ಕಾನೂನಾತ್ಮಕವಾಗಿ ಉತ್ತರಿಸಬಲ್ಲದು, ಆದರೆ ಸದ್ಯ ಸಂಘದ ವಿಚಾರದಲ್ಲಿ ಸಮಾಜದಲ್ಲಿ ಸೃಷ್ಟಿಯಾಗಿರುವ ನಿರಾಸಕ್ತಿಯ ಮಾನಸಿಕತೆಯೇ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










