ಮಂಗಳೂರು: ಪ್ರಸಿದ್ಧ ಪಿಲಿಕುಳ ಜೈವಿಕ ಉದ್ಯಾನವನವು ವಿಶಾಲವಾದ ಪ್ರದೇಶವನ್ನು ಹೊಂದಿದ್ದರೂ, ಸರಿಯಾದ ಪ್ರಚಾರದ ಅಭಾವ ಮತ್ತು ಆಡಳಿತಾತ್ಮಕ ನಿರ್ವಹಣೆಯ ಕೊರತೆಯಿಂದ ಹಿನ್ನಡೆ ಅನುಭವಿಸುತ್ತಿದೆ ಎಂದು ಕರ್ನಾಟಕ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಶಾಸಕ ಎಸ್.ಆರ್. ಶ್ರೀನಿವಾಸ್ ನೇತೃತ್ವದ ಸಮಿತಿಯು ಪಿಲಿಕುಳದ ವಿವಿಧ ವಿಭಾಗಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ ನಂತರ, ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಪ್ರಮುಖ ಸಭೆ ನಡೆಸಿ ನ್ಯೂನ್ಯತೆಗಳನ್ನು ಚರ್ಚಿಸಿತು. ಮಾಜಿ ಜಿಲ್ಲಾಧಿಕಾರಿ ಇಬ್ರಾಹಿಂ ಅವರ ಅವಧಿಯಲ್ಲಿ ನಡೆದಿದ್ದ ಉದ್ಯಾನವನದ ಪ್ರಚಾರ ಆಂದೋಲನವನ್ನು ಶಾಸಕ ಶಿವಕುಮಾರ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಪಿಲಿಕುಳದಲ್ಲಿ ಲಭ್ಯವಿರುವ ಖಾಲಿ ಜಾಗದ ಸೂಕ್ತ ಬಳಕೆ ಮತ್ತು ಸಮಗ್ರ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಸಮಿತಿಯ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಸೂಚನೆ ನೀಡಿದ್ದಾರೆ. ಆರ್ಥಿಕ ನಷ್ಟದ ಕುರಿತು ಶಾಸಕ ಶರವಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ, ಉದ್ಯಾನವನದ ವಾರ್ಷಿಕ ನಿರ್ವಹಣೆಗೆ ಸುಮಾರು 13 ಕೋಟಿ ರೂ. ವೆಚ್ಚವಾಗುತ್ತಿದ್ದು, ಅನುದಾನ ಮತ್ತು ಸಿಬ್ಬಂದಿ ಅಭಾವದಿಂದ ನಿರ್ವಹಣೆ ಸವಾಲಾಗಿದೆ ಎಂದು ವಿವರಿಸಿದರು. ಕಳೆದ ಮೂರು ವರ್ಷಗಳಲ್ಲಿ ಕ್ರಮವಾಗಿ 6.7 ಕೋಟಿ ರೂ. (2023-24), 10.2 ಕೋಟಿ ರೂ. (24-25), ಹಾಗೂ 8 ಕೋಟಿ ರೂ. (25-26) ಸರ್ಕಾರಿ ಅನುದಾನ ಬಂದಿದೆ ಎಂದು ತಿಳಿಸಿದರು.
ಖರ್ಚು-ವೆಚ್ಚಗಳ ಆಡಿಟ್ ವರದಿ ಹಾಗೂ ಗಾಲ್ಫ್ ಕ್ಲಬ್ ಮತ್ತು ಕೆಎಸ್ಟಿಡಿಸಿಯಿಂದ ಬರುವ ಆದಾಯದ ಮಾಹಿತಿಯನ್ನು ಒದಗಿಸುವಂತೆ ಸಮಿತಿ ಸದಸ್ಯರು ಅಧಿಕಾರಿಗಳಿಗೆ ಆಜ್ಞಾಪಿಸಿದರು. ಒಟ್ಟು 356.20 ಎಕರೆ ವಿಸ್ತೀರ್ಣವಿರುವ ಈ ಭೂಮಿಯು ಕಂದಾಯ ಇಲಾಖೆಯ ಲೀಸ್ನಲ್ಲಿದ್ದು, 2030ಕ್ಕೆ ಅವಧಿ ಮುಗಿಯಲಿದೆ. ಈ ಭೂಮಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ವರ್ಗಾಯಿಸುವ ಪ್ರಸ್ತಾವನೆ ಸಂಪುಟದ ಮುಂದೆ ಇದೆ. ಅಲ್ಲದೆ, ಸಿಬ್ಬಂದಿ ಕೊರತೆಯನ್ನು ನೀಗಿಸಲು ಮತ್ತು ಮೃಗಾಲಯವನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ (KZA) ಸಂಪೂರ್ಣವಾಗಿ ಹಸ್ತಾಂತರಿಸುವ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ.
ಉದ್ಯಾನವನದ ಪ್ರಮುಖ ಆಕರ್ಷಣೆಯಾದ 3D ತಾರಾಲಯದ ಪ್ರದರ್ಶನ ವ್ಯವಸ್ಥೆ ಮತ್ತು ಧ್ವನಿ ತಂತ್ರಜ್ಞಾನವು ಹಳೆಯದಾಗಿದ್ದು, ತೀವ್ರ ಕಳಪೆಯಾಗಿದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಪ್ರದರ್ಶನ ಪರದೆಯನ್ನು ಆಧುನಿಕ ತಂತ್ರಜ್ಞಾನಕ್ಕೆ ನವೀಕರಿಸಲು ಬರೋಬ್ಬರಿ 10 ಕೋಟಿ ರೂ. ಅಗತ್ಯವಿದ್ದು, ಸರ್ಕಾರಿ ವೆಚ್ಚದ ಬದಲು ಖಾಸಗಿ ಹೂಡಿಕೆ (PPP Model) ತರಲು ಯೋಜಿಸಲಾಗುತ್ತಿದೆ ಎಂದರು. ಉದ್ಯಾನವನವನ್ನು ಪುನರುಜ್ಜೀವನಗೊಳಿಸಲು ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಲಾಯಿತು. ಸಭೆಯ ನಂತರ ಮಾತನಾಡಿದ ಅಧ್ಯಕ್ಷರು, ಮಂಗಳೂರಿನಲ್ಲಿ ನಡೆಯಲಿರುವ ಮುಂಬರುವ ಸಂಪುಟ ಸಭೆಗೆ ಮುಂಚಿತವಾಗಿ ಮುಖ್ಯಮಂತ್ರಿಗಳಿಗೆ ವಿಶೇಷ ವರದಿ ಸಲ್ಲಿಸುವುದಾಗಿ ಹೇಳಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










